(ಮುನ್ಸೂಚನೆ: ಕೆಳಗೆ ಕೌಟುಂಬಿಕ ಹಿಂಸೆಯ ಬಗ್ಗೆ ಮಾಹಿತಿ ಇದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು)
ನೀವು ನಿಮ್ಮ ಸಂಗಾತಿಯ ಜೊತೆ, ಮದುವೆಯಾಗದೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ, ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದೀರಿ ಎಂದರ್ಥ. ಒಬ್ಬ ಮದುವೆಯಾಗದ ವಯಸ್ಕ ಸ್ತ್ರೀ ಮತ್ತು ಒಬ್ಬ ಮದುವೆಯಾಗದ ವಯಸ್ಕ ಪುರುಷ ಜೊತೆಗೆ ವಾಸಿಸುತ್ತಿದ್ದರೆ, ಅಥವಾ ಹಿಂದೆ ಯಾವಾಗೋ ಜೊತೆಗೆ ವಾಸಿಸಿದ್ದರೆ, ಅವರ ನಡುವಿನ ಸಂಬಂಧವನ್ನು “ಕೌಟುಂಬಿಕ ಸಂಬಂಧ” ಎಂದು ಪರಿಗಣಿಸಲಾಗುವುದು. ಮದುವೆಗಳಿಗೆ ಹೋಲಿಸಿದರೆ, ಲಿವ್-ಇನ್ ಸಂಬಂಧಗಳನ್ನು ಕಾನೂನು ನಿಯಂತ್ರಿಸುವುದಿಲ್ಲ. ಉದಾಹರಣೆಗೆ, ಲಿವ್-ಇನ್ ಸಂಬಂಧವನ್ನು ಜಾರಿಗೊಳಿಸಲು ಅದನ್ನು ನೋಂದಾಯಿಸಬೇಕಿಲ್ಲ, ಮತ್ತು ಸಂಬಂಧಧಿನದ ಹೊರಬರಲು ವಿಚ್ಛೇದನ ಬೇಕಿಲ್ಲ. ನಿಮಗೆ ಇಷ್ಟ ಬಂದಂತೆ ಸಂಬಂಧವನ್ನು ಅಂತ್ಯಗೊಳಿಸಬಹುದು.
ಲಿವ್-ಇನ್ ಸಂಬಂಧಗಳು “ಮದುವೆಯ ರೀತಿಯಲ್ಲಿ” ಇದ್ದರೆ ಮಾತ್ರ ಅವುಗಳನ್ನು ಕಾನೂನು ಗುರುತಿಸುತ್ತದೆ. ಅಂದರೆ ಆ ಲಿವ್-ಇನ್ ಸಂಬಂಧಗಳಲ್ಲಿ, ಅವು ಕಾನೂನುಬದ್ಧವಾಗಿ ಗುರುತಿಸಲ್ಪಡದಿದ್ದರೂ ಸಹ, ಮದುವೆಯ ಕೆಲವು ಅತ್ಯಗತ್ಯ ಗುಣಲಕ್ಷಣಗಳು ಇರಬೇಕು. ಲಿವ್-ಇನ್ ಸಂಬಂಧಗಳ ಮೇಲೆ ತೀರ್ಪುಗಳನ್ನು ನೀಡುವಾಗ ನ್ಯಾಯಾಲಯಗಳು ಅವುಗಳನ್ನು ಮದುವೆಗಳಿಗೆ ಹೋಲಿಸಿ, ಅವುಗಳಲ್ಲಿ ಮದುವೆಯ ಅತ್ಯಗತ್ಯ ಗುಣಲಕ್ಷಣಗಳು ಇವೆಯೋ ಇಲ್ಲವೋ ಎಂದು ತೀರ್ಮಾನಿಸುತ್ತವೆ.
“ಮದುವೆಯಂತಹ” ಲಿವ್-ಇನ್ ಸಂಬಂಧಗಳು ಕೆಳಗಿನ ಅಂಶಗಳನ್ನು ಹೊಂದಿರುತ್ತವೆ ಎಂದು ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ಹೇಳಿವೆ:
೧. ಸಂಬಂಧದ ಅವಧಿ:
ನೀವು ಮತ್ತು ನಿಮ್ಮ ಸಂಗಾತಿ, ಸ್ವೇಚ್ಛೆಯಿಂದ, ಸಾಕಷ್ಟು ಸಮಯದವರೆಗೆ (ಹಲವು ತಿಂಗಳುಗಳು ಅಥವಾ ವರ್ಷಗಳು), ಒಂದೇ ಮನೆಯಲ್ಲಿ ವಾಸವಾಗಿರಬೇಕು. ಕೇವಲ ಕೆಲವು ವಾರಗಳು, ಒಂದು ವಾರಾಂತ್ಯ, ಅಥವಾ ಒಂದು ರಾತ್ರಿ ಒಟ್ಟಿಗೆ ಕಳೆದರೆ ಅದು ಲಿವ್-ಇನ್ ಸಂಬಂಧ ಎನಿಸಲಾರದು.
೨. ಸಾರ್ವಜನಿಕವಾಗಿ ಜನರ ಜೊತೆ ಬೆರೆಯುವುದು:
ನೀವು ಮತ್ತು ನಿಮ್ಮ ಸಂಗಾತಿ ಗಂಡ-ಹೆಂಡತಿಯ ಹಾಗೆ ಸ್ನೇಹಿತರು, ನೆಂಟರು, ಮತ್ತು ಇನ್ನಿತರರ ಜೊತೆ ಸಾರ್ವಜನಿಕವಾಗಿ ಬೆರೆತಿರಬೇಕು.
೩. ವಯಸ್ಸು ಮತ್ತು ವೈವಾಹಿಕ ಸ್ಥಿತಿ:
ನೀವು ಮತ್ತು ನಿಮ್ಮ ಸಂಗಾತಿ ಮದುವೆಯಾಗಲು ಅರ್ಹರಾಗಿರಬೇಕು. ಅಂದರೆ, ನಿಮ್ಮಿಬರಿಗೂ ಲಿವ್-ಇನ್ ಸಂಬಂಧವನ್ನು ಪ್ರವೇಶಿಸುವ ಸಮಯದಲ್ಲಿ ಜೀವಂತ ಗಂಡ/ಹೆಂಡತಿ ಇರಬಾರದು, ಮತ್ತು ನೀವಿಬ್ಬರೂ ಮದುವೆಯ ವಯಸ್ಸು ತಲುಪಿರಬೇಕು – ಮಹಿಳೆಯರಿಗೆ ೧೮, ಮತ್ತು ಪುರುಷರಿಗೆ ೨೧.
೪. ಲೈಂಗಿಕ ಸಂಬಂಧ:
ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ಭಾವನಾತ್ಮಕ ಮತ್ತು ಆತ್ಮೀಯ ಆಸರೆಯುಳ್ಳ ಲೈಂಗಿಕ ಸಂಬಂಧವಿರಬೇಕು.
೫. ಆರ್ಥಿಕ ವ್ಯವಸ್ಥೆ:
ಗಂಡ-ಹೆಂಡತಿಯರ ಹಾಗೆ ನೀವು ಮತ್ತು ನಿಮ್ಮ ಸಂಗಾತಿಯ ಮಧ್ಯೆ ಆರ್ಥಿಕ ವ್ಯವಸ್ಥೆಯಿರಬೇಕು. ಉದಾಹರಣೆಗೆ, ನಿಮ್ಮಿಬ್ಬರ ಆರ್ಥಿಕ ಸಂಪನ್ಮೂಲಗಳನ್ನು ನೀವು ಸಾಮಾನ್ಯ ನಿಧಿಯಾಗಿ ಸೇರಿಸಿ ಬಳಸುತ್ತಿದ್ದೀರಿ, ಮತ್ತು ಜಂಟಿ ಬ್ಯಾಂಕ್ ಖಾತೆಗಳು, ಆಸ್ತಿಗಳ ಮೇಲೆ ಜಂಟಿ ಒಡೆತನ, ದೀರ್ಘ ಕಾಲದ ಔದ್ಯೋಗಿಕ ಬಂಡವಾಳ ಹೂಡುವುದು, ಇನ್ನಿತರೇ ಉಪಕರಣಗಳ ಮೂಲಕ, ಆರ್ಥಿಕವಾಗಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಿರಬೇಕು.
೬. ಕೌಟುಂಬಿಕ ವ್ಯವಸ್ಥೆ:
ನಿಮ್ಮಿಬ್ಬರಲ್ಲಿ ಒಬ್ಬರು, ವಿಶೇಷವಾಗಿ ಮಹಿಳೆಯಾದವರು, ಮನೆಯನ್ನು ನಡೆಸುವ/ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಲ್ಲಿ, ಹಾಗು ಮನೆಗೆಲಸ (ಸ್ವಚ್ಛ ಮಾಡುವುದು, ಅಡುಗೆ ಮಾಡುವುದು, ಮನೆಯ ನಿರ್ವಹಣೆ, ಇತ್ಯಾದಿ) ಮಾಡುತ್ತಿದ್ದಲ್ಲಿ, ನಿಮ್ಮ ಸಂಬಂಧ ಮದುವೆಯಂತಹ ಕೌಟುಂಬಿಕ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ.
೭. ಪಕ್ಷಗಳ ಉದ್ದೇಶ ಮತ್ತು ನಡುವಳಿಕೆ:
ಅವರ ಸಂಬಂಧ ಏನು, ಸಂಬಂಧದೊಳಗಿನ ಅವರ ಪಾತ್ರ ಮಾತು ಕರ್ತವ್ಯಗಳು – ಇವುಗಳ ಬಗ್ಗೆ ಅವರ ಮಧ್ಯೆ ಇರುವ ಜಂಟಿ ಉದ್ದೇಶ ಅವರ ಸಂಬಂಧದ ಪ್ರಕೃತಿಯನ್ನು ನಿರ್ಧರಿಸುತ್ತದೆ. ೮. ಮಕ್ಕಳು: ಲಿವ್-ಇನ್ ಸಂಬಂಧದಲ್ಲಿ ಮಕ್ಕಳು ಇರುವುದು ಇದು “ಮದುವೆಯಂತಹ ಸಂಬಂಧ”, ಮತ್ತು ತಮ್ಮ ಸಂಬಂಧದ ಬಗ್ಗೆ ದೂರ ದೃಷ್ಟಿಯ ದೃಷ್ಟಿಕೋನವಿದೆ ಎಂಬುದನ್ನು ಬಲವಾಗಿ ಸೂಚಿಸುತ್ತದೆ.
ಮೇಲೆ ನೀಡಿರುವ ಮಾನದಂಡಗಳನ್ನು ಪೂರೈಸದಿದ್ದರೆ, ನ್ಯಾಯಾಲಯಗಳು ನಿಮ್ಮ ಸಂಬಂಧವನ್ನು ಲಿವ್-ಇನ್ ಸಂಬಂಧ ಎಂದು ಒಪ್ಪುವುದಿಲ್ಲ.