ನೀವು ಮಗುವಿನ ನೆಂಟರಾಗಿ, ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ಭಾರತದಲ್ಲಿಯೇ ಅಥವಾ ಅಂತರ್-ದೇಶಿಯ ದತ್ತು ಕೂಡ ಪಡೆಯಬಹುದಾಗಿದೆ.
ಭಾರತದಲ್ಲಿಯೇ ದತ್ತು ಪಡೆಯುವುದು:
ಮಗುವಿನ ನೆಂಟರು ಭಾರತದಲ್ಲಿಯೇ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆ ಅನುಸರಿಸಬೇಕು:
ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ನೀವು ಕೆಳಗಿನಂತೆ ಮಗುವಿನ ಜೊತೆ ನೆಂಟಸ್ಥಿಕೆ ಹೊಂದಿರಬೇಕು:
- ನೀವು ಮಗುವಿನ ತಂದೆಯ ಸಹೋದರ/ಸಹೋದರಿಯಾಗಿರಬೇಕು
- ನೀವು ಮಗುವಿನ ತಾಯಿಯ ಸಹೋದರ/ಸಹೋದರಿಯಾಗಿರಬೇಕು
- ನೀವು ಮಗುವಿನ ತಂದೆಯ ತಂದೆ/ತಾಯಿಯಾಗಿರಬೇಕು
- ನೀವು ಮಗುವಿನ ತಾಯಿಯ ತಂದೆ/ತಾಯಿಯಾಗಿರಬೇಕು
ಹಾಗು, ನೀವು ನಿವಾಸಿ ಭಾರತೀಯರು, ಅನಿವಾಸಿ ಭಾರತೀಯರು, ಅಥವಾ ಕನಿಷ್ಟ ೧ ವರ್ಷದ ಕಾಲ ಭಾರತದಲ್ಲಿ ವಾಸವಾಗಿದ್ದ ಸಾಗರೋತ್ತರ ಭಾರತೀಯ ನಾಗರೀಕರಾಗಿರಬೇಕು.
ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:
- ನಿವಾಸದ ಪುರ್ವಾವೆ
- ಮಗು ೫ ವರ್ಷದ ಮೇಲಿದ್ದಲ್ಲಿ ಅದರ ಒಪ್ಪಿಗೆ
- ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
- ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ
- ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವನ್ನು ಧೃಢೀಕರಿಸುವ ಶಪಥಪತ್ರ, ಮತ್ತು ನಿಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸೂಚಿಸುವ ಶಪಥಪತ್ರ
ಹಂತ ೩: ಇದಾದಮೇಲೆ, ಸಂಬಂಧಪಟ್ಟ ನ್ಯಾಯಾಲಯಕ್ಕೆ ನೀವು ದತ್ತು ಸ್ವೀಕೃತಿ ಅರ್ಜಿಯನ್ನು ಸಲ್ಲಿಸಬೇಕು. ನ್ಯಾಯಾಲಯದ ಆದೇಶ ಸಿಕ್ಕ ಮೇಲೆ ಅದನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಬೇಕು. ಅಂತರ್-ರಾಷ್ಟ್ರೀಯ ದತ್ತು ಸ್ವೀಕೃತಿ:
ಮಗುವಿನ ನೆಂಟರು ಅಂತರ್-ರಾಷ್ಟ್ರೀಯ ದತ್ತು ಸ್ವೀಕಾರ ಮಾಡಲು ಕೆಳಗಿನ ಪ್ರಕ್ರಿಯೆ ಪಾಲಿಸಬೇಕು:
ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ನಿಗದಿಪಡಿಸಿಕೊಳ್ಳಬೇಕು. ನೀವು ಸಾಗರೋತ್ತರ ಭಾರತೀಯ ನಾಗರಿಕರು ಅಥವಾ ಅನಿವಾಸಿ ಭಾರತೀಯರು ಇದ್ದಲ್ಲಿ ನಿಮ್ಮ ನೆಂಟರ ಮಗುವನ್ನು ದತ್ತು ಪಡೆಯಬಹುದಾಗಿದೆ.
ಹಂತ ೨: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.
ಹಂತ ೩: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.
ಹಂತ ೪: ನಿಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಿದಾಗ ನಿಮ್ಮ ಅರ್ಜಿಯನ್ನು, ಕೌಟುಂಬಿಕ ಹಿನ್ನೆಲೆಯ ವರದಿಯನ್ನು ತಯಾರಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಳಿಸಲಾಗುತ್ತದೆ. ಇದಕ್ಕೆ ಶುಲ್ಕವಿರಬಹುದು. ಈ ವರದಿಯನ್ನು ನೀವು ನೆಲೆಸಿದ್ದ ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಲಾಗುತ್ತದೆ.
ಹಂತ ೫: ಮಗು ನೆಲೆಸಿದ್ದ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನಿಮ್ಮ ದತ್ತು ಸ್ವೀಕೃತಿಯ ಅರ್ಜಿ ಮತ್ತು ಮಗುವಿನ ಜೈವಿಕ ತಂದೆ-ತಾಯಿಯರೇ ಒಪ್ಪಿಗೆ ಪತ್ರವನ್ನು, ಕೆಳಗಿನ ದಾಖಲೆಗಳೊಂದಿಗೆ ಸಲ್ಲಿಸಬೇಕು:
- ಮಗು ೫ ವರ್ಷದ ಮೇಲಿರುವಾಗ ಅದರ ಒಪ್ಪಿಗೆ
- ನೀವು ವಾಸಿಸುವ ದೇಶದ ಅನುಮತಿ
- ಮಗುವಿನೊಂದಿಗೆ ನಿಮ್ಮ ನೆಂಟಸ್ಥಿಕೆ (ವಂಶ ವೃಕ್ಷ)
- ನೀವು, ಮಗು, ಮತ್ತು ಮಗುವಿನ ಜೈವಿಕ ತಂದೆ-ತಾಯಿಯರು ಇರುವ ಇತ್ತೀಚಿನ ಭಾವಚಿತ್ರ
- ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
- ಕೌಟುಂಬಿಕ ಹಿನ್ನೆಲೆ ವರದಿ
ಇದಾದಮೇಲೆ ದತ್ತು ಸ್ವೀಕೃತಿ ಆದೇಶದ ಪ್ರಮಾಣೀಕರಿಸಲಾದ ಪ್ರತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸಬೇಕು.