ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣದ ರಕ್ಷಣೆ ಹೇಗೆ ಪಡೆಯಬಹುದು?

ಕೊನೆಯ ಅಪ್ಡೇಟ್ Nov 19, 2022

ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣ ರಕ್ಷಣೆ ಬೇಕೆಂದಲ್ಲಿ ನೀವು ವಕೀಲರು ಅಥವಾ ರಕ್ಷಾಧಿಕಾರಿಗಳ ನೆರವಿನಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡಿದಾಗ, ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯಿಂದ ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗಾಗಿ ನ್ಯಾಯಾಲಯವು “ರಕ್ಷಣಾ ಆದೇಶ”ವನ್ನು ಹೊರಡಿಸುತ್ತದೆ. ಈ ಆದೇಶವು ತಾತ್ಕಾಲಿಕವಾಗಿದ್ದು, ಬದಲಾದ ಸಂದರ್ಭಗಳ ಕಾರಣ ಇನ್ನು ಈ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸುವ ತನಕ, ಒಂದು ನಿರ್ದಿಷ್ಟ ಕಾಲದವರೆಗೆ ಅನ್ವಯಿಸುತ್ತದೆ.

ಬೇಕಾದಲ್ಲಿ ಈ ಆದೇಶದ ಅವಧಿಯನ್ನು ಹೆಚ್ಚಿಸಲು ನಿಮ್ಮ ವಕೀಲರ ನೆರವನ್ನು ತೆಗೆದುಕೊಳ್ಳಬಹುದು. ಈ ರಕ್ಷಣಾ ಆದೇಶ ನಿಮಗೆ

ಕೆಳಿಗಿನಂತೆ ಸಹಾಯವಾಗುತ್ತದೆ:

೧. ಕೌಟುಂಬಿಕ ಹಿಂಸೆಯನ್ನು ನಿಲ್ಲಿಸುವುದು. ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ಯಾವುದೇ ರೀತಿಯ ಕೌಟುಂಬಿಕ ಹಿಂಸೆಯನ್ನು ಮಾಡುವುದು/ ಮಾಡಲು ಸಹಾಯ ಮಾಡುವುದು
  • ನಿಮಗೆ ಬೆಂಬಲಿಸುತ್ತಿರುವ ನಿಮ್ಮ ಸ್ನೇಹಿತರು, ನೆಂಟರು, ಅಥವಾ ಇನ್ನ್ಯಾರೋ ವ್ಯಕ್ತಿಯ ವಿರುದ್ಧ ಹಿಂಸೆ ಎಸಗುವುದು

೨. ಯಾವುದೇ ರೀತಿಯ ದೌರ್ಜನ್ಯ ಅಥವಾ ಅಡಚಣೆಯನ್ನು ಒಡ್ಡದಂತೆ ತಡೆಗಟ್ಟುವುದು: ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ನಿಮ್ಮ ವಾಸದ ಸ್ಥಳ, ಉದ್ಯೋಗ ಸ್ಥಳ, ಅಥವಾ ಇನ್ನ್ಯಾವುದೋ ಜಾಗದಲ್ಲಿ ನಿಮಗೆ ಕಿರುಕುಳ ನೀಡುವುದು/ ಅಡಚಣೆಗಳನ್ನುಂಟು ಮಾಡುವುದು
  • ನಿಮ್ಮ ಮಗುವಿಗೆ ಶಾಲೆಯಲ್ಲಿ, ಅಥವಾ ಇತರೆ ಜಾಗದಲ್ಲಿ ತೊಂದರೆ ಕೊಡುವುದು
  • ನಿಮ್ಮನ್ನು ಈ-ಮೇಲ್, ದೂರವಾಣಿ, ಆನ್ಲೈನ್, ಇನ್ನಿತರೇ ಮಾರ್ಗಗಳಿಂದ ಸಂಪರ್ಕ ಮಾಡುವುದು

೩. ನಿಮ್ಮ ಆಸ್ತಿ ಹಾಗು ಹಣಕಾಸಿನ ವ್ಯವಹಾರಗಳನ್ನು ರಕ್ಷಿಸುವುದು:

ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ: 

  • ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಆಸ್ತಿ, ಮದುವೆಯ ಉಡುಗೊರೆಗಳು, ಸ್ತ್ರೀಧನ, ಇತ್ಯಾದಿಗಳನ್ನು ಮಾರುವುದು ಅಥವಾ ದಾನ ಮಾಡುವುದು
  • ನಿಮ್ಮ ಒಪ್ಪಿಗೆಯಿಲ್ಲದೆ, ಮತ್ತು ನ್ಯಾಯಾಲಯಕ್ಕೆ ತಿಳಿಸದೇ, ನಿಮ್ಮ ಸ್ವಂತ/ಜಂಟಿ ಬ್ಯಾಂಕ್ ಖಾತೆಯನ್ನು , ಅಥವಾ ನಿಮ್ಮ ಸ್ವಂತ/ಜಂಟಿ ಬ್ಯಾಂಕ್ ಲಾಕರನ್ನು ಉಪಯೋಗಿಸುವುದು

೪. ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ನಡುವಳಿಕೆಯನ್ನು ನಿಯಂತ್ರಿಸುವುದು:

ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ನಿಮಗೆ ನೋವುಂಟುಮಾಡಬಲ್ಲ ಬಂದೂಕುಗಳು, ಶಸ್ತ್ರಾಸ್ತ್ರಗಳು, ಅಥವಾ ಇನ್ನಿತರೇ ಅಪಾಯಕಾರಿ ವಸ್ತುಗಳನ್ನು ಉಪಯೋಗಿಸುವುದು. ಇಂತಹ ವಸ್ತುಗಳನ್ನು ನೇರವಾಗಿ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು ಎಂದು ಕೂಡ ನ್ಯಾಯಾಲಯ ಆದೇಶ ಹೊರಡಿಸಬಹುದು.
  • ಕೌಟುಂಬಿಕ ಹಿಂಸೆಗೆ ಕಾರಣವಾಗಬಲ್ಲ, ಸಾರಾಯಿ, ಅಫೀಮು, ಇನ್ನಿತರೇ ಅಮಲೇರಿಸುವಂತಹ ಪದಾರ್ಥಗಳ ಸೇವನೆ ಮಾಡುವುದು

ರಕ್ಷಣಾ ಆದೇಶದ ನಂತರವೂ ಕಿರುಕುಳ ತಪ್ಪದಿದ್ದಲ್ಲಿ, ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಇದನ್ನು ತಿಳಿಸಬಹುದು. ಹೀಗೆ ಮಾಡಿದಲ್ಲಿ, ಕಿರುಕುಳ ನೀಡುತ್ತಿರುವ ವ್ಯಕ್ತಿಗೆ ನ್ಯಾಯಾಲಯ, ಒಂದು ವರ್ಷದ ಸೆರೆಮನೆ ವಾಸ ಅಥವಾ ೨೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸುತ್ತದೆ.

 

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.