INGRAM ಪೋರ್ಟಲ್ ಮೂಲಕ, ಕಂಪನಿ, ಒಂಬುಡ್ಸ್ಮನ್, ಇತ್ಯಾದಿಗಳಾಗಬಹುದಾದ ಸಂಬಂಧಿತ ಪ್ರಾಧಿಕಾರಗಳನ್ನು ಸಂಪರ್ಕಿಸುವ ಮೂಲಕ ಕುಂದುಕೊರತೆ ನಿವಾರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದಾಗ್ಯೂ, ಸಮಸ್ಯೆಯು ಇನ್ನೂ ಬಾಕಿ ಉಳಿದಿದ್ದರೆ, ಗ್ರಾಹಕರು ಸೂಕ್ತವಾದ ಗ್ರಾಹಕ ನ್ಯಾಯಾಲಯ ಅಥವಾ ವೇದಿಕೆಗಳನ್ನು ವಕೀಲರ ಸಹಾಯದಿಂದ ಸಂಪರ್ಕಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ವಿವಾದ ಉಂಟಾದ ನಂತರ 2 ವರ್ಷಗಳೊಳಗೆ ದಾಖಲಾಗುವ ದೂರುಗಳನ್ನು ಮಾತ್ರ ಗ್ರಾಹಕ ವಿವಾದ ಪರಿಹಾರ ಆಯೋಗಗಳಲ್ಲಿ ವಿಚಾರಣೆಗೆ ಸ್ವೀಕರಿಸಲಾಗುತ್ತದೆ.
ಗ್ರಾಹಕ ದೂರು ವೇದಿಕೆಗಳು
ತಮ್ಮ ಹಕ್ಕುಗಳ ಉಲ್ಲಂಘನೆ ಆಗಿದ್ದರೆ ಗ್ರಾಹಕರು ಸಂಪರ್ಕಿಸಬಹುದಾದ ಸಂಬಂಧಿತ ಅಧಿಕಾರಿಗಳು ಮತ್ತು ದೂರು ವೇದಿಕೆಗಳನ್ನು ಗ್ರಾಹಕ ಸಂರಕ್ಷಣಾ ಕಾನೂನು ನಿರ್ದಿಷ್ಟಪಡಿಸುತ್ತದೆ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳಿವೆ. ಈ ಎಲ್ಲಾ ವೇದಿಕೆಗಳು ಗ್ರಾಹಕರ ಸಂಬಂಧಿತ ವಿಷಯಗಳನ್ನು ಆಲಿಸುವ ಕರ್ತವ್ಯವನ್ನು ಹೊಂದಿವೆ ಮತ್ತು ಪ್ರತಿ ವಿಷಯಕ್ಕೆ ಸರಿಯಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳತಕ್ಕದ್ದು. ಈ ಆಯೋಗಗಳ ಅಧಿಕಾರ ವ್ಯಾಪ್ತಿಯು ಈ ಕೆಳಕಂಡ ವಿಷಯಗಳ ಮೇಲೆ ಆಧರಿಸಿದೆ: ಪಡೆದ ಸರಕು ಅಥವಾ ಸೇವೆಗಳ ಮೌಲ್ಯ (ಬೆಲೆ).
ಗ್ರಾಹಕ ಅಥವಾ ಮಾರಾಟಗಾರನ ವಾಸಸ್ಥಳ ಅಥವಾ ಪಕ್ಷಗಳಲ್ಲಿ ಒಬ್ಬರ ಕೆಲಸದ ಸ್ಥಳ ಅಥವಾ ವಿವಾದ ಪ್ರಾರಂಭವಾದ ಸ್ಥಳ
ದೂರು ಸಲ್ಲಿಸುವ ವ್ಯಕ್ತಿ ವಾಸಿಸುವ ಸ್ಥಳ
ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಗಳಲ್ಲಿ ವಿಚಾರಣೆಗೆ ಒಪ್ಪಿಕೊಳ್ಳಲು ವಿವಾದ ಉದ್ಭವಿಸಿದಾಗಿನಿಂದ 2 ವರ್ಷಗಳೊಳಗೆ ದೂರುಗಳನ್ನು ಸಲ್ಲಿಸಬೇಕು. ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ಸಂಪರ್ಕಿಸಬಹುದಾದ ದೂರು ಪರಿಹಾರ/ಆಯೋಗಗಳು ಮತ್ತು ಅವುಗಳಿಂದ ನಿರ್ಣಯಿಸಲಾದ ವಿಷಯಗಳ ಪ್ರಕಾರಗಳು ಈ ಕೆಳಗಿನಂತಿವೆ:
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (DCDRC)
ಜಿಲ್ಲಾ ಆಯೋಗವು ಜಿಲ್ಲಾ ಮಟ್ಟದ ದೂರು ಪರಿಹಾರ ವೇದಿಕೆಯಾಗಿದ್ದು, ಒಂದು ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಸರಕುಗಳ ಬಗ್ಗೆ ದೂರುಗಳನ್ನು ಪರಿಶೀಲಿಸುತ್ತದೆ. ಆಯೋಗವು 21 ದಿನಗಳ ಅವಧಿಯಲ್ಲಿ ದೂರನ್ನು ಸ್ವೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ. ಆಯೋಗವು ನಿಗದಿತ ಸಮಯದಲ್ಲಿ ಪ್ರತಿಕ್ರಿಯೆ ನೀಡದಿದ್ದರೆ, ದೂರನ್ನು ಸ್ವೀಕರಿಸಿ ಜಿಲ್ಲಾ ಆಯೋಗಗಳು ಪರಿಶೀಲಿಸುತ್ತವೆ. ದೂರನ್ನು ತಿರಸ್ಕರಿಸುವ ಮೊದಲು, ಆಯೋಗವು ದೂರುದಾರರಿಗೆ ವಿಚಾರಣೆಗೆ ಅವಕಾಶವನ್ನು ನೀಡಬೇಕು. ಆಯೋಗವು ಸರಕುಗಳು ಅಥವಾ ಸೇವೆಗಳಿಂದ ಯಾವುದೇ ಸಮಸ್ಯೆಗಳನ್ನು / ದೋಷಗಳನ್ನು ತೆಗೆದುಹಾಕಲು ಆದೇಶಿಸುವ ಅಧಿಕಾರವನ್ನು ಹೊಂದಿದೆ, ಅಥವಾ ದೂರುದಾರರಿಗೆ ಪರಿಹಾರವಾಗಿ ದಂಡವನ್ನು ಪಾವತಿಸಲು ಆದೇಶಿಸಬಹುದು. ಪ್ರಕರಣದ ಕಕ್ಷಿದಾರರು ಜಿಲ್ಲಾ ಆಯೋಗದ ಆದೇಶದ ಮೇಲ್ಮನವಿಯನ್ನು ಆದೇಶದ 45 ದಿನಗಳಲ್ಲಿ ರಾಜ್ಯ ಆಯೋಗಕ್ಕೆ ಸಲ್ಲಿಸಲು ಅವಕಾಶವಿದೆ. ರಾಷ್ಟ್ರೀಯ ಗ್ರಾಹಕ ಪರಿಹಾರ ವೆಬ್ಸೈಟ್ನಲ್ಲಿ ನೀಡಲಾದ ಜಿಲ್ಲಾ ಆಯೋಗಗಳ ವಿವರಗಳನ್ನು ನೀವು ಕಾಣಬಹುದು.
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (SCDRC)
ರಾಜ್ಯ ಆಯೋಗವು ಆಯಾ ರಾಜ್ಯದ ರಾಜಧಾನಿಯಲ್ಲಿ ನೆಲೆಗೊಂಡಿರುವ ರಾಜ್ಯ ಮಟ್ಟದ ದೂರು ಪರಿಹಾರ ವೇದಿಕೆಯಾಗಿದ್ದು, ಅಲ್ಲಿ 1 ಕೋಟಿಯಿಂದ 10 ಕೋಟಿ ಮೌಲ್ಯದ ಸರಕುಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಬಹುದು. ದೇಶದಲ್ಲಿ ಸುಮಾರು 35 ರಾಜ್ಯ ಆಯೋಗಗಳಿವೆ, ಅಲ್ಲಿ ದೂರುಗಳು, ಜಿಲ್ಲಾ ಆಯೋಗದಿಂದ ಮೇಲ್ಮನವಿಗಳು ಮತ್ತು ಅನ್ಯಾಯದ ಒಪ್ಪಂದಗಳ ಬಗ್ಗೆ ಪ್ರಕರಣಗಳನ್ನು ಆಲಿಸಲಾಗುತ್ತದೆ. ರಾಜ್ಯ ಆಯೋಗದ ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ರಾಷ್ಟ್ರೀಯ ಆಯೋಗಕ್ಕೆ, ಆದೇಶದ ದಿನಾಂಕದಿಂದ 30 ದಿನಗಳಲ್ಲಿ ಸಲ್ಲಿಸಬಹುದು. ಅಂತಹ ಮೇಲ್ಮನವಿ ಸಲ್ಲಿಸಿದ ನಂತರ, ರಾಷ್ಟ್ರೀಯ ಆಯೋಗವು 90 ದಿನಗಳಲ್ಲಿ ಅದನ್ನು ನಿರ್ಧರಿಸುವ ಅಗತ್ಯವಿದೆ.
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC):
ರಾಷ್ಟ್ರೀಯ ಆಯೋಗವು ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಉನ್ನತ ಪ್ರಾಧಿಕಾರ. ಇದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿದೆ. 10 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸರಕುಗಳು ಅಥವಾ ಸೇವೆಗಳ ಬಗ್ಗೆ ದೂರುಗಳು ಮತ್ತು ರಾಜ್ಯ ಆಯೋಗ ಅಥವಾ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಆದೇಶಗಳ ವಿರುದ್ಧ ಮೇಲ್ಮನವಿಗಳನ್ನು NCDRC ಗೆ ಸಲ್ಲಿಸಬಹುದು. ರಾಷ್ಟ್ರೀಯ ಆಯೋಗದ ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಆದೇಶ ಹೊರಡಿಸಿದ ದಿನಾಂಕದಿಂದ 30 ದಿನಗಳ ಅವಧಿಯಲ್ಲಿ ಸಲ್ಲಿಸಬಹುದು. ಆಯೋಗದ ಆದೇಶಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಆಯೋಗವು ಆದೇಶಗಳನ್ನು ಪ್ರಕಟಿಸಲು ಕಾನೂನುಬದ್ಧ ಹಕ್ಕನ್ನು ಹೊಂದಿದೆ ಮತ್ತು ಈ ಆದೇಶಗಳನ್ನು ಪ್ರಕಟಿಸಿದ್ದಕ್ಕಾಗಿ ಆಯೋಗದ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ. ರಾಷ್ಟ್ರೀಯ ಆಯೋಗದ ಪೋರ್ಟಲ್ ತನ್ನ ವೇದಿಕೆ ಮೂಲಕ ಎಲೆಕ್ಟ್ರಾನಿಕ್ ದೂರಿನ ನೋಂದಣಿ ಮತ್ತು ಫೈಲಿಂಗ್ಗೆ ಸಂಬಂಧಿಸಿದ ವೀಡಿಯೊ ಸೂಚನೆಗಳನ್ನು ಸಹ ಒದಗಿಸುತ್ತದೆ.
ದೂರುಗಳನ್ನು ನಿರ್ಧರಿಸುವ ಸಮಯ
ಗ್ರಾಹಕರ ದೂರನ್ನು 3 ತಿಂಗಳ ಅವಧಿಯಲ್ಲಿ ಆಯೋಗಗಳು ನಿರ್ಧರಿಸಬೇಕು. ಉತ್ಪನ್ನಗಳ / ದೋಷಗಳ ಪರೀಕ್ಷೆಯ ಅವಶ್ಯಕತೆ ಇದ್ದಲ್ಲಿ ಇದನ್ನು 5 ತಿಂಗಳವರೆಗೆ ವಿಸ್ತರಿಸಬಹುದು.
ಆಯೋಗದ ಆದೇಶಗಳಿಗೆ ಮೇಲ್ಮನವಿ
ನಿಗದಿತ ಅವಧಿಯಲ್ಲಿ ಮೇಲ್ಮನವಿ ಸಲ್ಲಿಸದಿದ್ದಲ್ಲಿ ಆಯೋಗಗಳು ನೀಡಿದ ಆದೇಶವೇ ಅಂತಿಮವಾಗಿರುತ್ತದೆ. ಈ ನಿಯಮವು ವಿನಾಯಿತಿಗಳನ್ನು ಹೊಂದಿದೆ, ಆಯೋಗವು ನಿಗದಿತ ಸಮಯದಲ್ಲಿ ಮೇಲ್ಮನವಿಗಳನ್ನು ಸಲ್ಲಿಸದ ಪ್ರಕರಣಗಳನ್ನು ಸ್ವೀಕರಿಸಬಹುದು. ಈ ನಿಬಂಧನೆಗಳ ಹೊರತಾಗಿ, ಪಕ್ಷಗಳು ಅರ್ಜಿ ಸಲ್ಲಿಸಿದರೆ ಪ್ರಕರಣಗಳನ್ನು ಕ್ರಮವಾಗಿ ರಾಜ್ಯ ಮತ್ತು ರಾಷ್ಟ್ರೀಯ ಆಯೋಗಗಳು ಒಂದು ಜಿಲ್ಲಾ ಆಯೋಗದಿಂದ ಇನ್ನೊಂದಕ್ಕೆ ಮತ್ತು ಒಂದು ರಾಜ್ಯ ಆಯೋಗದಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು.
ಮೇಲೆ ನೀಡಿರುವ ಯಾವುದೇ ಫೋರಮ್ಗಳಿಗೆ ದೂರು ಸಲ್ಲಿಸಿದ ಗ್ರಾಹಕರು, ಆನ್ಲೈನ್ ಕೇಸ್ ಸ್ಟೇಟಸ್ ಪೋರ್ಟಲ್ ಮೂಲಕ ತಮ್ಮ ಪ್ರಕರಣವನ್ನು ಟ್ರ್ಯಾಕ್ ಮಾಡಬಹುದು. ಪ್ರಕರಣವನ್ನು ಪತ್ತೆ ಹಚ್ಚಲು ನಿಮ್ಮ ಕೇಸ್ ಸಂಖ್ಯೆಯ ವಿವರಗಳಿಗಾಗಿ ನಿಮ್ಮ ವಕೀಲರನ್ನು ನೀವು ಕೇಳಬಹುದು.