ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನು ವಿವಿಧ ರೀತಿಯ ಅಪರಾಧಗಳನ್ನಾಗಿ ಪರಿಗಣಿಸಿ ದಂಡನೆ ವಿಧಿಸುತ್ತದೆ.
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು:
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಯಾವುದೇ ಮಹಿಳೆಯ ನಗ್ನಚಿತ್ರವನ್ನು ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅಂತಹ ಕೃತ್ಯ ಅಪರಾಧ. ಮೊದಲನೇ ಬಾರಿಯ ಇಂತಹ ಅಪರಾಧಕ್ಕೆ ಮೂರು ವರ್ಷಗಳವರೆಗೆ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ. ಪುನ: ಈ ರೀತಿಯ ಅಪರಾಧ ಎಸಗಿದಲ್ಲಿ, ಐದು ವರ್ಷಗಳವರೆಗೆ ಸೆರೆವಾಸ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ.
ಲೈಂಗಿಕಕ್ರಿಯೆಗಳನ್ನು ಬಹಿರಂಗವಾಗಿ ತೋರಿಸುವಂತಹ ಮಾಹಿತಿಯನ್ನು ಹರಡುವುದು:
ಮೇಲಾಗಿ, ಯಾವುದೇ ವ್ಯಕ್ತಿ ಲೈಂಗಿಕ ಕ್ರಿಯೆಗಳನ್ನು ಬಹಿರಂಗವಾಗಿ ತೋರಿಸುವ ಚಿತ್ರ, ವಿಡಿಯೋ ಅಥವಾ ಮತ್ತಾವುದೇ ರೂಪದಲ್ಲಿ ಮಾಹಿತಿಯನ್ನು ಅಂತರ್ಜಾಲದಲ್ಲಿ ಹರಡಿದಲ್ಲಿ, ಆತನ ಕೃತ್ಯವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಇಬ್ಬರು ವ್ಯಕ್ತಿಗಳ ನಡುವಿನ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಅವರ ಅನುಮತಿ ಇಲ್ಲದೆ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧ. ಮೊದಲನೇ ಬಾರಿಯ ಇಂತಹ ಅಪರಾಧಕ್ಕೆ ಐದು ವರ್ಷಗಳವರೆಗೆ ಸೆರೆವಾಸ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ. ಪುನ: ಈ ರೀತಿಯ ಅಪರಾಧ ಎಸಗಿದಲ್ಲಿ, ಏಳು ವರ್ಷಗಳವರೆಗೆ ಸೆರೆವಾಸ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ.
ಅಶ್ಲೀಲತೆಯನ್ನು ವೀಕ್ಷಿಸುವಂತೆ ಒತ್ತಾಯಿಸುವುದು: ಒಬ್ಬ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲತೆಯನ್ನು ಆಕೆ ವೀಕ್ಷಿಸುವಂತೆ ಬಲವಂತ ಮಾಡುವುದು ಲೈಂಗಿಕ ದೌರ್ಜನ್ಯವೆನ್ನಿಸಿಕೊಳ್ಳುತ್ತದೆ. ಇದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.