ಧಾರ್ಮಿಕೇತರ ಕಾನೂನಿನಡಿ ದತ್ತು ಸ್ವೀಕಾರ:
ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿ ನೀವು ಭಾವೀ ದತ್ತು ತಂದೆ/ತಾಯಿ ಎಂದು ಪರಿಗಣಿಸಬೇಕಾದಲ್ಲಿ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
ಆರೋಗ್ಯ:
- ೧. ನೀವು ದೈಹಿಕವಾಗಿ ಸ್ವಸ್ಥವಾಗಿರಬೇಕು. ಅಂದರೆ, ನಿಮಗೆ ಯಾವುದೇ ಮಾರಣಾತಿಕ ರೋಗವಿರಬಾರದು
- ೨. ನೀವು ಆರ್ಥಿಕವಾಗಿ ಸಧೃಢವಾಗಿರಬೇಕು, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರಬೇಕು, ಮತ್ತು ಮಗುವನ್ನು ದತ್ತು ತೆಗೆದುಕೊಂಡು ಅದಕ್ಕೆ ಒಳ್ಳೆಯ ಪಾಲನೆ-ಪೋಷಣೆ ನೀಡುವಿರಿ ಎಂದು ಪ್ರೇರಿತರಾಗಿರಬೇಕು.
ವೈವಾಹಿಕ ಸ್ಥಿತಿ:
ಅವಿವಾಹಿತ ದತ್ತು ತಂದೆ/ತಾಯಿ: ನಿಮಗೆ ಈಗಾಗಲೇ ಮದುವೆಯಾಗಿದೆಯೋ ಇಲ್ಲವೋ, ಅಥವಾ ಈಗಾಗಲೇ ಮಕ್ಕಳಿದ್ದಾರೋ ಇಲ್ಲವೋ, ಎನ್ನುವುದು ಅಪ್ರಸ್ತುತ. ಅಂದರೆ, ಅವಿವಾಹಿತ/ವಿಚ್ಛೇದಿತ/ಮಕ್ಕಳುಳ್ಳ ವೈವಾಹಿಕ ವ್ಯಕ್ತಿಗಳೂ ಸಹ ದತ್ತು ಸ್ವೀಕಾರ ಪಡೆಯಬಹುದು. ಆದರೆ, ನೀವು ಹೆಣ್ಣು ಮಗುವನ್ನು ದತ್ತು ಪಡೆಯಬೇಕೆಂದಲ್ಲಿ ನೀವು ಮಹಿಳೆಯಾಗಿರಬೇಕು. ಏಕೆಂದರೆ, ಒಬ್ಬ ಅವಿವಾಹಿತ ಮಹಿಳೆ ಗಂಡು ಹಾಗು ಹೆಣ್ಣು ಮಕ್ಕಳನ್ನು ದತ್ತು ಪಡೆಯಬಹುದು, ಆದರೆ ಒಬ್ಬ ಅವಿವಾಹಿತ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯುವಂತಿಲ್ಲ.
ವಿವಾಹಿತ ದತ್ತು ತಂದೆ/ತಾಯಿ:
ಮದುವೆಯಾದ ದಂಪತಿಗಳ ಸಂದರ್ಭದಲ್ಲಿ, ಗಂಡ-ಹೆಂಡತಿ ಇಬ್ಬರೂ ದತ್ತು ಸ್ವೀಕೃತಿಗೆ ಒಪ್ಪಿಗೆ ನೀಡಬೇಕು, ಮತ್ತು ಕನಿಷ್ಟ ೨ ವರ್ಷಗಳ ಕಾಲ ಸ್ಥಿರವಾದ ವೈವಾಹಿಕ ಜೀವನ ನಡೆಸಿರಬೇಕು.
ಈಗಾಗಲೇ ಇದ್ದ ಮಕ್ಕಳು:
ಯಾವ ಮದುವೆಯಾದ ದಂಪತಿಗಳಿಗೆ ಈಗಾಗಲೇ ೩ರ ರಿಂದ ಹೆಚ್ಚ ಮಕ್ಕಳಿದ್ದಾರೋ, ಅವರು ದತ್ತು ಸ್ವೀಕಾರ ಮಾಡಲಾರರು. ಈ ನಿಯಮಕ್ಕೆ ಅಪವಾದಗಳು: ವಿಶೇಷ ಚೇತನ ಮಕ್ಕಳು, ಬಹಳಷ್ಟು ಸಮಯದಿಂದ ದತ್ತು ತೆಗೆದುಕೊಳ್ಳಲು ಕಾಯುತ್ತಿರುವ ಮಕ್ಕಳು, ನೆಂಟರಿಂದ ದತ್ತು ಸ್ವೀಕಾರ, ಮತ್ತು ಮಲ ತಂದೆ/ತಾಯಿಯಿಂದ ದತ್ತು ಸ್ವೀಕಾರ.
ವಯಸ್ಸು:
ಮಗು ಮತ್ತು ಭಾವೀ ದತ್ತು ತಂದೆ/ತಾಯಿಯ ಮಧ್ಯೆ ಕನಿಷ್ಠ ೨೫ ವರ್ಷಗಳ ಅಂತರವಿರಬೇಕು. ಭಾವೀ ದತ್ತು ತಂದೆ ಮತ್ತು ತಾಯಿಯರ ಸೇರಿಸಲಾದ ವಯಸ್ಸನ್ನು ಅವರು ಬೇರೆ-ಬೇರೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅರ್ಹರಿದ್ದಾರೋ ಇಲ್ಲವೋ ಎಂದು ನಿರ್ಧರಿಸಲು ಪರಿಗಣಿಸಲಾಗುತ್ತದೆ. ನೀವು ಬೇರೆ-ಬೇರೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂದು ತಿಳಿದುಕೊಳ್ಳಲು ಕೆಳಗಿನ ಟೇಬಲ್ ನೋಡಿ:
ಮಗುವಿನ ವಯಸ್ಸು | ಭಾವೀ ದತ್ತು ತಂದೆ–ತಾಯಿಯರ ಒಟ್ಟು ಸೇರಿಸಿದ ಗರಿಷ್ಟ ವಯಸ್ಸು (ಮದುವೆಯಾದ ದಂಪತಿಗಳು) | ಅವಿವಾಹಿತ ಭಾವೀ ದತ್ತು ತಂದೆ/ತಾಯಿಯ ವಯಸ್ಸು |
೪ ವರ್ಷಗಳ ವರೆಗೆ | ೯೦ ವರ್ಷಗಳು | ೪೫ ವರ್ಷಗಳು |
೪ರಿಂದ ೮ವರ್ಷಗಳ ವರೆಗೆ | ೧೦೦ ವರ್ಷಗಳು | ೫೦ ವರ್ಷಗಳು |
೮ರಿಂದ ೧೮ವರ್ಷಗಳ ವರೆಗೆ | ೧೧೦ ವರ್ಷಗಳು | ೫೫ ವರ್ಷಗಳು |
ಹಿಂದೂ ಕಾನೂನಿನಡಿ ದತ್ತು ಸ್ವೀಕಾರ:
ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ ನೀವು ಭಾವೀ ದತ್ತು ತಂದೆ/ತಾಯಿ ಎಂದು ಪರಿಗಣಿಸಲು ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
ನೀವು ಸ್ತ್ರೀ ಅಥವಾ ಪುರುಷ ಹಿಂದೂ ಆಗಿ, ಗಂಡು ಅಥವಾ ಹೆಣ್ಣು ಮಗುವನ್ನು ದತ್ತು ಪಡೆಯಬಹುದು. ಒಬ್ಬ ಹಿಂದೂ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯಲು ಆ ಮಗುವಿಗಿಂತ ಕನಿಷ್ಠ ೨೧ ವರ್ಷ ದೊಡ್ಡವನಾಗಿರಬೇಕು. ಹಾಗೆಯೇ, ಒಬ್ಬ ಹಿಂದೂ ಮಹಿಳೆ ಗಂಡು ಮಗುವನ್ನು ದತ್ತು ಪಡೆಯಲು ಆ ಮಗುವಿಗಿಂತ ಕನಿಷ್ಟ ೨೧ ವರ್ಷ ದೊಡ್ಡವಳಾಗಿರಬೇಕು. ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆಯಡಿಯಲ್ಲಿ ನೀವು ದತ್ತು ಪಡೆಯಬೇಕೆಂದಲ್ಲಿ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
ವಯಸ್ಸು:
ನೀವು ವಯಸ್ಕರಾಗಿದ್ದು (ವಯಸ್ಸು ೧೮ರ ಮೇಲೆ ಇರಬೇಕು), ಮಾನಸಿಕವಾಗಿ ಸ್ವಸ್ಥವಾಗಿರಬೇಕು.
ವೈವಾಹಿಕ ಸ್ಥಿತಿ:
ವಿವಾಹಿತ ದತ್ತು ತಂದೆ/ತಾಯಿ: ನೀವು ಮದುವೆಯಾಗಿದ್ದಲ್ಲಿ, ದತ್ತು ಪಡೆಯಲು ನಿಮ್ಮ ಜೀವಂತ ಗಂಡ/ಹೆಂಡತಿಯ ಒಪ್ಪಿಗೆ ಇರಬೇಕು. ಆದರೆ, ನಿಮ್ಮ ಸಂಗಾತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಲೋಕವನ್ನು ತ್ಯಜಿಸಿದ್ದರೆ, ಅಥವಾ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದರೆ, ಈ ಒಪ್ಪಿಗೆಯ ಅವಶ್ಯಕತೆ ಇಲ್ಲ. ನಿಮಗೆ ಒಬ್ಬ ಹೆಂಡತಿ ಇದ್ದಲ್ಲಿ ಅವಳು ದತ್ತು ಮಗುವಿನ ತಾಯಿಯೆಂದು, ಹಾಗು ನಿಮಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರು ಇದ್ದರೆ, ಎಲ್ಲರಿಗಿಂತ ಹಿರಿಯ ಹೆಂಡತಿಯು ದತ್ತು ಮಗುವಿನ ತಾಯಿ, ಮತ್ತು ಇನ್ನಿತರ ಹೆಂಡಂದಿರು ಮಲ-ತಾಯಿಯರು ಎಂದು ಪರಿಗಣಿಸಲಾಗುತ್ತದೆ.
ಅವಿವಾಹಿತ ದತ್ತು ತಂದೆ/ತಾಯಿ: ನೀವು ಅವಿವಾಹಿತ ಅಥವಾ ವಿಧವೆ/ವಿಧುರರಾಗಿದ್ದರೆ, ನೀವು ಮಗುವನ್ನು ದತ್ತು ಪಡೆಯಬಹುದು. ಕಾಲಾಂತರದಲ್ಲಿ ನೀವು ಮದುವೆಯಾಗುವ ಗಂಡ/ಹೆಂಡತಿಯು ನಿಮ್ಮ ಮಗುವಿನ ದತ್ತು ತಂದೆ/ತಾಯಿ ಎಂದು ಪರಿಗಣಿಸಲಾಗುತ್ತಾರೆ.
ಈಗಾಗಲೇ ಇರುವ ಮಕ್ಕಳು:
ನೀವು ಹೆಣ್ಣು ಮಗುವನ್ನು ದತ್ತು ಪಡೆಯಬೇಕೆಂದಲ್ಲಿ ನಿಮಗೆ ಈಗಾಗಲೇ ಜೀವಂತವಿರುವ (ಜೈವಿಕ ಅಥವಾ ದತ್ತು ಪಡೆದಿರುವ) ಹಿಂದೂ ಹೆಣ್ಣು ಮಗಳು / ಮೊಮ್ಮಗಳು ಇರಬಾರದು. ಹಾಗು ನೀವು ಗಂಡು ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ನಿಮಗೆ ಈಗಾಗಲೇ ಜೀವಂತವಿರುವ (ಜೈವಿಕ ಅಥವಾ ದತ್ತು ಪಡೆದಿರುವ) ಹಿಂದೂ ಗಂಡು ಮಗ / ಮೊಮ್ಮಗ ಇರಬಾರದು.