ಅರ್ಜಿದಾರನು ಕೋರಿರುವ ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿ 30 ದಿನಗಳ ಸಮಯವನ್ನು ಹೊಂದಿರುತ್ತಾರೆ. ಅರ್ಜಿಯನ್ನು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಿದ್ದಲ್ಲಿ, ಕೋರಿರುವ ಮಾಹಿತಿಯನ್ನು 35 ದಿನಗಳ ಒಳಗೆ ಒದಗಿಸತಕ್ಕದ್ದು. ಕೋರಿರುವ ಮಾಹಿತಿಯು ವ್ಯಕ್ತಿಯೊಬ್ಬನ ಪ್ರಾಣಕ್ಕೆ ಪ್ರತಿಕೂಲವಾಗಿದ್ದು, ತುರ್ತಾಗಿ ಅಗತ್ಯವಿದ್ದಲ್ಲಿ, ಅಂತಹ ಮಾಹಿತಿಯನ್ನು 48 ಘಂಟೆಗಳ ಒಳಗೆ ಒದಗಿಸತಕ್ಕದ್ದು.
ಈ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ಕೆಲವು ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಬಹುದು. ಈ ಕಾಯ್ದೆಯ ಪರಿಧಿಯಿಂದ ವಿನಾಯ್ತಿ ಪಡೆದಿರುವ ಮಾಹಿತಿಗಳ ವಿವರಕ್ಕಾಗಿ ಸೆಕ್ಷನ್ 8 ಮತ್ತು 9 ನ್ನು ದಯವಿಟ್ಟು ಗಮನಿಸಿರಿ.
ಮಾಹಿತಿಯನ್ನು 30/35 ದಿನಗಳ ಒಳಗೆ ಒದಗಿಸದಿದ್ದಲ್ಲಿ, ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ತಡೆಹಿಡಿದಿದ್ದಾರೆಂದು ನೀವು ಭಾವಿಸಬಹುದು. ಮೇಲಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಗಾಗಿ ಅರ್ಜಿ ಶುಲ್ಕವನ್ನು ಹೊರತುಪಡಿಸಿ ಬೇರಾವುದೇ ಮೊತ್ತವನ್ನು ನಿಮ್ಮಿಂದ ಪಡೆಯುವಂತಿಲ್ಲ.