ನಿಮ್ಮ ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ನೀವು ವಿಚ್ಛೇದನ ಪಡೆಯಬಹುದು. ಇದನ್ನುವೈವಾಹಿಕ ಜೀವನವನ್ನು ತೊರೆದು ಹೋಗುವುದು/ಪರಿತ್ಯಾಗ ಮಾಡುವುದು ಎಂದೂ ಎನ್ನಬಹುದು.
ಬಿಟ್ಟು ಹೋಗುವ ತತ್ಕ್ಷಣದ ಪರಿಣಾಮ:
ನಿಮ್ಮ ಸಂಗಾತಿಯು, ನಿಮ್ಮ ಒಪ್ಪಿಗೆ ಇಲ್ಲದೆ, ಎಂದೂ ಹಿಂದಿರುಗಿ ಬರದ ಉದ್ದೇಶದಿಂದ ನಿಮ್ಮನ್ನು ಬಿಟ್ಟು ಹೋದರೆ ಅದನ್ನು ಕಾನೂನಿನಡಿಯಲ್ಲಿ ವೈವಾಹಿಕ ಜೀವನವನ್ನು ಪರಿತ್ಯಾಗ ಮಾಡುವುದು ಎಂದು ಎನ್ನುತ್ತಾರೆ. ಇದನ್ನು ಆಯಾ ಪ್ರಕರಣಗಳ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ನಿಮ್ಮ ಸಂಗಾತಿಯು, ತಾತ್ಕಾಲಿಕವಾಗಿ, ಅಥವಾ, ಕೋಪದ ಸನ್ನಿವೇಶದಲ್ಲಿ, ನಿಮ್ಮನ್ನು ಶಾಶ್ವತವಾಗಿ ಅಗಲುವ ಉದ್ದೇಶವಿಲ್ಲದೆ ನಿಮ್ಮಿಂದ ದೂರ ಹೋದರೆ, ಅದು ಕಾನೂನಿನಡಿ ವಿಚ್ಛೇದನಕ್ಕೆ ಆಧಾರವಾಗದು.
ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಜೊತೆ ಜಗಳವಾಡಿ ಕೋಪದಿಂದ ಮನೆ ಬಿಟ್ಟು ಹೊರಗೆ ಹೋದರೆ, ಅದು ಕಾನೂನಿನಡಿ ವಿವಾಹವನ್ನು ತೊರೆದು ಹೋಗುವುದು ಎಂದು ಎನಿಸಿಕೊಳ್ಳುವುದಿಲ್ಲ.
ನಿಮ್ಮನ್ನು ನಿಮ್ಮ ಸಂಗಾತಿ ತೊರೆದು ಹೋಗುವ ಹಾಗೆ ನೀವೇ ಮಾಡುವುದು:
ಆದಾಗ್ಯೂ, ಯಾವ ಸಂವೇದನಾಶೀಲ ವ್ಯಕ್ತಿಯೂ ಸಹ ನಿಮ್ಮ ಜೊತೆ ಇರಲಾರ ಎಂಬ ಪರಿಸ್ಥಿತಿಯನ್ನು ನೀವೇ ತಂದೊಡ್ಡಿಲ್ಲ ಎಂದು ಪರಿಶೀಲಿಸುವುದು ಇಂತಹ ಪ್ರಕರಣಗಳಲ್ಲಿ ಬಹಳ ಮುಖ್ಯವಾಗುತ್ತದೆ. ನೀವೇ ಇಂತಹ ಪರಿಸ್ಥಿತಿಯನ್ನು ಹುಟ್ಟಿಸಿದ್ದಲ್ಲಿ, ಕೋರ್ಟು ನಿಮ್ಮ ಸಂಗಾತಿಯು ವಿವಾಹವನ್ನು ತ್ಯಜಿಸಿ ಹೋದರು ಎಂಬ ಆಧಾರದ ಮೇಲೆ ನಿಮ್ಮ ವಿಚ್ಛೇದನದ ಅರ್ಜಿ ಸ್ವೀಕರಿಸುವುದಿಲ್ಲ.
ವಿವಾಹವನ್ನು ಪರಿತ್ಯಜಿಸುವ ಬೇರೆ ರೀತಿಗಳು:
ನಿಮ್ಮನ್ನು ಒಮ್ಮೆಲೇ ಬಿಟ್ಟುಹೋಗುವ ಕ್ರಿಯೆಯಲ್ಲದೆ, ಕಾಲಾಂತರದಲ್ಲಿ ನಿಮ್ಮ ಸಂಗಾತಿಯ ಹಲವಾರು ನಡವಳಿಕೆಗಳ ಪುನರಾವರ್ತನೆಯೂ ಸಹ ವೈವಾಹಿಕ ಪರಿತ್ಯಾಗ ಎಂದು ಕರೆಯಲ್ಪಡಬಹುದು.
ನಿಮ್ಮ ಸಂಗಾತಿಯು ಕಾಲಾಂತರದಲ್ಲಿ ನಿಮ್ಮ ಹಾಗು ನಿಮ್ಮ ನೆಂಟರ/ಸ್ನೇಹಿತರ ಸಂಪರ್ಕ ನಿಲ್ಲಿಸಿದ್ದಲ್ಲಿ, ಅಥವಾ, ನಿಮ್ಮ ಜೊತೆ ವಾಸಿಸಿದ್ದರೂ ಸಹ, ನಿಮ್ಮ / ನಿಮ್ಮ ಕುಟುಂಬದವರೊಂದಿಗೆ ಮಾತು ಬಿಟ್ಟಿದ್ದರೆ, ಅಥವಾ ವೈವಾಹಿಕ ಜೀವನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರೆ, ಆರ್ಥಿಕವಾಗಿ ಮನೆಯ ಖರ್ಚು-ವೆಚ್ಚದಲ್ಲಿ ಏನೂ ಸಹಾಯ ಮಾಡದಿದ್ದಲ್ಲಿ, ಈ ಎಲ್ಲ ನಡವಳಿಕೆಗಳಿಗೆ ಕಾನೂನು ವೈವಾಹಿಕ ಪರಿತ್ಯಾಗ ಎಂದು ಅರ್ಥೈಸುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿರಬೇಕು ಎಂದೇನಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಕೋರ್ಟು ವೈವಾಹಿಕ ಪರಿತ್ಯಾಗವು ಇಂತಹ ನಡವಳಿಕೆ ಶುರುವಾದಾಗಿನಿಂದ ಪ್ರಾರಂಭವಾಗಿದೆ ಎಂದು ನಿರ್ಧರಿಸಬಹುದು. ನ್ಯಾಯಾಲಯವು ಎಲ್ಲ ಸಂದರ್ಭ-ಸನ್ನಿವೇಶಗಳನ್ನು ಪರಿಶೀಲಿಸಿ ವಿಚ್ಛೇದನವನ್ನು ನೀಡುತ್ತದೆ.
ವೈವಾಹಿಕ ಪರಿತ್ಯಾಗದ ಸಮಯಾವಧಿ:
ಪರಿತ್ಯಾಗವನ್ನು ವಿಚ್ಛೇದನದ ಆಧಾರವನ್ನಾಗಿಸುವುದಾದರೆ:
- ನಿಮ್ಮ ಸಂಗಾತಿಯು ನಿಮ್ಮನ್ನು ತ್ಯಜಿಸಿ ಕನಿಷ್ಠ ಎರಡು ವರ್ಷಗಳಾಗಿರಬೇಕು
- ಈ ಎರಡು ವರ್ಷಗಳ ಕಾಲ ನಿರಂತರವಾಗಿರಬೇಕು