ಎಫ್ಐಆರ್ ಸಲ್ಲಿಸುವುದರ ಮೂಲಕ ನೀವು ಅಪರಾಧವೊಂದನ್ನು ಕುರಿತು ಪೋಲೀಸರಿಗೆ ವರದಿ ನೀಡಿದ ನಂತರ, ಕರ್ತವ್ಯದ ಮೇಲಿರುವ ಅಧಿಕಾರಿಯು ಮ್ಯಾಜಿಸ್ಟ್ರೇಟರಿಗೆ ವರದಿಯೊಂದನ್ನು ಸಲ್ಲಿಸತಕ್ಕದ್ದು.ಮ್ಯಾಜಿಸ್ಟ್ರೇಟರು ಯಾವುದೇ ಅನವಶ್ಯಕ ವಿಳಂಬವಿಲ್ಲದೆ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು ತನಿಖೆಯೊಂದಿಗೆ ಮುಂದುವರೆಯುತ್ತಾರೆ.ಪೋಲೀಸರು ಈ ಕ್ರಮವನ್ನು ಕಡ್ಡಾಯವಾಗಿ ಅನುಸರಿಸಬೇಕಿರುತ್ತದೆ. ಹೀಗೆ ಮಾಡುವುದರಿಂದ ಮ್ಯಾಜಿಸ್ಟ್ರೇಟರು ತನಿಖೆಯ ಮೇಲೆ ಹಿಡಿತ ಸಾಧಿಸಲು ಮತ್ತು ಅವಶ್ಯಕತೆ ಇದ್ದಲ್ಲಿ ಪೋಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಸಾಧ್ಯವಾಗುತ್ತದೆ.
ಪ್ರಕರಣದ ನಿಜಾಂಶ ಮತ್ತು ಸಂದರ್ಭ ಕುರಿತು ತನಿಖೆ ಮಾಡಿ, ಸೂಕ್ತ ಎಂದು ಕಂಡುಬಂದಲ್ಲಿ ಅಪರಾಧ ಎಸಗಿದ ವ್ಯಕ್ತಿಯನ್ನು ಬಂಧಿಸಲು ಪೋಲೀಸರು ಕ್ರಮ ತೆಗೆದುಕೊಳ್ಳುತ್ತಾರೆ.
ಅಪರಾಧವು ಗಂಭೀರ ಸ್ವಭಾವದ್ದಲ್ಲ ಎಂದು ಪೋಲೀಸ್ ಅಧಿಕಾರಿಗೆ ಮನದಟ್ಟಾದಲ್ಲಿ, ಆತ ತನ್ನ ಕೈಕೆಳಗಿನ ಅಧಿಕಾರಿಯನ್ನು ತನಿಖೆಗಾಗಿ ನೇಮಿಸಬಹುದು. ಮೇಲಾಗಿ ಮುಂದಿನ ತನಿಖೆ ಮಾಡುವ ಅಗತ್ಯವಿಲ್ಲ ಎಂದು ಕಂಡುಬಂದಲ್ಲಿ ಪೋಲೀಸರು ತನಿಖೆ
ಮಾಡದಿರಲು ನಿರ್ಧರಿಸಬಹುದು.
ಪೋಲೀಸರು ತಮ್ಮ ತನಿಖೆ ಪೂರೈಸಿ, ಅಪರಾಧ ಪ್ರಕರಣದಲ್ಲಿ ಮುಂದುವರೆಯಲು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ, ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗುತ್ತದೆ. ಆದರೆ, ತನಿಖೆಯ ನಂತರ ಪೋಲೀಸರಿಗೆ ಅಪರಾಧ ಕೃತ್ಯ ಜರುಗಿರುವುದರನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳು ದೊರೆಯದಿದ್ದಲ್ಲಿ, ಅವರು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮ್ಯಾಜಿಸ್ಟ್ರೇಟರಿಗೆ ಶಿಫಾರಸ್ಸು ಮಾಡುತ್ತಾರೆ.
ದೋಷಾರೋಪಣ ಪಟ್ಟಿಯ ಸಲ್ಲಿಕೆಯೊಂದಿಗೆ ಅಪರಾಧ ಪ್ರಕರಣದ ವಿಚಾರಣೆ ಪ್ರಾರಂಭವಾಗುತ್ತದೆ. ದೋಷಾರೋಪಣ ಪಟ್ಟಿ ಅಥವಾ ಪ್ರಕರಣ ಮುಕ್ತಾಯ ಮಾಡುವಂತೆ ವರದಿ ಸಲ್ಲಿಸಲು ಪೋಲೀಸರಿಗೆ ಯಾವುದೇ ಕಾಲಮಿತಿ ಇಲ್ಲ. ದೋಷಾರೋಪಣ ಪಟ್ಟಿಯನ್ನು ನಿರ್ದಿಷ್ಟ ಅವಧಿಯೊಳಗೆ ಸಲ್ಲಿಸುವಂತೆ ಮ್ಯಾಜಿಸ್ಟ್ರೇಟರೂ ಸಹ ಪೋಲೀಸರಿಗೆ ನಿರ್ದೇಶನ ನೀಡುವಂತಿಲ್ಲ. ಆದರೆ, ಆರೋಪಿ ಜೈಲಿನಲ್ಲಿದ್ದಲ್ಲಿ, 60 ದಿನಗಳೊಳಗಾಗಿ (ಅಪರಾಧಕ್ಕೆ ನೀಡುವ ಜೈಲುವಾಸವು 10 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ) ಅಥವಾ 90 ದಿನಗಳೊಳಗಾಗಿ (ಅಪರಾಧಕ್ಕೆ ನೀಡುವ ಜೈಲುವಾಸವು 10 ವರ್ಷ ಮೀರಿದ್ದಲ್ಲಿ) ಪೋಲೀಸರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸತಕ್ಕದ್ದು