ಸಾರ್ವಜನಿಕ ಮಾಹಿತಿ ಅಧಿಕಾರಿಯು 30 ದಿನಗಳ ಅವಧಿಯಲ್ಲಿ ಯಾವುದೇ ಆದೇಶವನ್ನು ಮಾಡದಿದ್ದಲ್ಲಿ ಈ ತೀರ್ಮಾನದ ವಿರುದ್ಧ ನೀವು ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ಸದರಿ ಮೇಲ್ಮನವಿಯನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಗಿಂತ ಹಿರಿಯರಾದ ಅಧಿಕಾರಿಯ ಮುಂದೆ, 30 ದಿನಗಳ ಒಳಗೆ ಸಲ್ಲಿಸಬಹುದಾಗಿದೆ. ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬವಾಗಿದ್ದು ಸದರಿ ಮೇಲ್ಮನವಿ ಅಧಿಕಾರಿಗೆ ಈ ವಿಳಂಬವು ನ್ಯಾಯೋಚಿತವಾದುದು ಎಂದು ಮನದಟ್ಟಾದಲ್ಲಿ, ಮೇಲ್ಮನವಿ ಸಲ್ಲಿಸುವ ಅವಧಿಯನ್ನು ಅವರು ವಿಸ್ತರಿಸಬಹುದಾಗಿದೆ.
ಸಾಮಾನ್ಯವಾಗಿ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ಅಧಿಕೃತ ವೆಬ್ ಸೈಟ್ ಬನಲ್ಲಿ ಮೇಲ್ಮನವಿ ಪ್ರಾಧಿಕಾರಿಯ ಕುರಿತು ಮಾಹಿತಿ ನೀಡಿರುತ್ತವೆ. ಸದರಿ ಮೇಲ್ಮನವಿ ಅಧಿಕಾರಿಯು ಸಾರ್ವಜನಿಕ ಸಂಪರ್ಕಾಧಿಕಾರಿಗಿಂತ ಹಿರಿಯ ಶ್ರೇಣಿಯವರಾಗಿರುತ್ತಾರೆ. ಸಾರ್ವಜನಿಕ ಸಂಪರ್ಕಾಧಿಕಾರಿಯ ಆದೇಶದ ವಿರುದ್ಧ ಮೂರನೇ ವ್ಯಕ್ತಿಯೂ ಸಹ 30 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ.
ಮೊದಲನೇ ಮೇಲ್ಮನವಿ ಪ್ರಾಧಿಕಾರದ ಆದೇಶದಿಂದ ನಿಮಗೆ ಪರಿಹಾರ ದೊರೆಕದಿದ್ದಲ್ಲಿ, 90 ದಿನಗಳ ಅವಧಿಯೊಳಗೆ ನೀವು ಎರಡನೇ ಮೇಲ್ಮನವಿಯನ್ನು ರಾಜ್ಯ ಮಾಹಿತಿ ಆಯೋಗ ಅಥವಾ ಕೇಂದ್ರ ಮಾಹಿತಿ ಆಯೋಗಕ್ಕೆ ಸಲ್ಲಿಸಬಹುದಾಗಿದೆ. ನಿರ್ದಿಷ್ಟ ಪಡಿಸಿದ ನಮೂನೆಯಲ್ಲಿ ಎರಡನೇ ಮೇಲ್ಮನವಿಯನ್ನು ಸಲ್ಲಿಸತಕ್ಕದ್ದು.
ಮಾಹಿತಿಯನ್ನು ನೀಡಲು ನಿರಾಕರಿಸಿದ ಕಾರಣಗಳು ನ್ಯಾಯೋಚಿತ ಎಂದು ರುಜುವಾತು ಮಾಡುವ ಜವಾಬ್ದಾರಿ ಸಾರ್ವಜನಿಕ ಸಂಪರ್ಕ ಅಧಿಕಾರಿಯದ್ದಾಗಿರುತ್ತದೆ. ಮಾಹಿತಿ ಆಯೋಗವು 30 ದಿನಗಳ ಅವಧಿಯೊಳಗಾಗಿ ಮೇಲ್ಮನವಿಯನ್ನು ವಿಲೇ ಮಾಡತಕ್ಕದ್ದು. ಲಿಖಿತ ರೂಪದಲ್ಲಿ ದಾಖಲು ಮಾಡಿದ ಕಾರಣಗಳಿಗಾಗಿ ಈ ಅವಧಿಯನ್ನು ನಲವತ್ತೈದು ದಿನಗಳವರೆಗೆ ವಿಸ್ತರಿಸಬಹುದಾಗಿದೆ.
ಮೇಲ್ಮನವಿಯನ್ನು ತೀರ್ಮಾನ ಮಾಡಲು ಮಾಹಿತಿ ಆಯೋಗವು ಸಾರ್ವಜನಿಕ ಪ್ರಾಧಿಕಾರಕ್ಕೆ-
ನಿರ್ದಿಷ್ಟ ಸ್ವರೂಪದಲ್ಲಿ ಮಾಹಿತಿಯನ್ನು ನೀಡಲು
ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವಂತೆ
ಸೂಕ್ತ ಮಾಹಿತಿಯನ್ನು ಪ್ರಕಟಿಸುವಂತೆ
ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ
ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವಂತೆ
ವಾರ್ಷಿಕ ವರದಿಯನ್ನು ನೀಡುವಂತೆ
ಯಾವುದೇ ದೂರುದಾರನಿಗೆ ಪರಿಹಾರ ನೀಡುವಂತೆ
– ಆದೇಶ ಮಾಡಬಹುದು.
ಆಯೋಗವು ಜುಲ್ಮಾನೆಯನ್ನೂ ವಿಧಿಸಬಹುದು ಮತ್ತು ನಿರ್ದಿಷ್ಟ ಅರ್ಜಿಗಳನ್ನು ತಿರಸ್ಕರಿಸಲೂಬಹುದು.