ನೀವು ಹಾಗು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ವಿಚ್ಛೇದನದ ಪ್ರಕರಣಗಳನ್ನು “ಕುಟುಂಬ ನ್ಯಾಯಾಲಯ” ಎಂಬ ಪ್ರತ್ಯೇಕ ನ್ಯಾಯಾಲಯಗಳು ನಿರ್ಧರಿಸುತ್ತವೆ. ಈ ಕೆಳಕಂಡ ಸ್ಥಳಗಳ ಕುಟುಂಬ ನ್ಯಾಯಾಲಯಗಳಲ್ಲಿ ನೀವು ವಿಚ್ಛೇದನದ ಅರ್ಜಿ ಸಲ್ಲಿಸಬಹುದು:
೧. ನಿಮ್ಮ ಮದುವೆಯಾದ ಊರು:
ನೀವು ಅಥವಾ ನಿಮ್ಮ ಸಂಗಾತಿ, ನೀವು ಮದುವೆಯಾದ ಊರಿನಲ್ಲಿರುವ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಬೆಂಗಳೂರಿನಲ್ಲಿ ಮದುವೆಯಾಗಿದ್ದಲ್ಲಿ, ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿ ಸಲ್ಲಿಸಬಹುದು.
೨. ನಿಮ್ಮ ಸಂಗಾತಿ ವಾಸಿಸುವ ಊರು:
ನಿಮ್ಮ ಸಂಗಾತಿಯು ವಾಸಿಸುವ ಊರಿನಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಸಂಗಾತಿಯು ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದಲ್ಲಿ, ಹುಬ್ಬಳ್ಳಿಯ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.
೩. ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರು:
ನೀವು ಅಥವಾ ನಿಮ್ಮ ಸಂಗಾತಿಯು, ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಮೈಸೂರಿನಲ್ಲಿ ಕೊನೆಯದಾಗಿ ಜೊತೆಗೆ ವಾಸಿಸಿದ್ದಲ್ಲಿ, ಮೈಸೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.
೪. ನೀವು ವಾಸಿಸುವ ಊರು:
ಹೆಂಡತಿ: ನೀವು ನಿಮ್ಮ ಗಂಡನಿಂದ ವಿಚ್ಛೇದನ ಬಯಸಿದ್ದಲ್ಲಿ, ನೀವು ವಾಸಿಸಿರುವ ಊರಿನಲ್ಲೇ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಮಂಗಳೂರಿನಲ್ಲಿ ನೆಲೆಸಿದ್ದರೆ, ಮಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು, ನಿಮ್ಮ ಪತಿ ಮಂಗಳೂರಿನಲ್ಲಿ ಇಲ್ಲದಿದ್ದರೂ ಸಹ, ಸಲ್ಲಿಸಬಹುದು. ಗಂಡ ಹಾಗು ಹೆಂಡತಿ: ನಿಮ್ಮ ಸಂಗಾತಿ ವಿದೇಶಕ್ಕೆ ಹೋಗಿದ್ದಾಗ, ನೀವು ನೆಲೆಸಿದ್ದ ಊರಿನ ಕೋರ್ಟಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ದಯವಿಟ್ಟು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ವಕೀಲರೊಂದಿಗೆ ವಿಚಾರಿಸಿ.