ಭಾವೀ ದತ್ತು ತಂದೆ-ತಾಯಂದಿರು ಕಾನೂನುಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕುಗಳು, ಸವಲತ್ತುಗಳು, ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದತ್ತು ಸ್ವೀಕಾರ ಎನ್ನುತ್ತಾರೆ. ಕಾನೂನಿನ ಔಪಚಾರಿಕತೆಗಳು ಮುಗಿದ ಮೇಲೆ ಆ ಮಗು ಶಾಶ್ವತವಾಗಿ ತನ್ನ ಜೈವಿಕ ತಂದೆ-ತಾಯಂದಿರಿಂದ ಬೇರೆಗೊಂಡು, ತನ್ನ ದತ್ತು ತಂದೆ-ತಾಯಂದಿರ ಮಗು ಎಂದು ಕರೆಯಲ್ಪಡುತ್ತದೆ.
ಭಾರತದಲ್ಲಿ ದತ್ತು ಸ್ವೀಕಾರದ ಕಾನೂನು ತಂದೆ-ತಾಯಿ ಮತ್ತು ಮಗುವಿನ ಧರ್ಮವನ್ನು ಆಧರಿಸಿದೆ. ಕೆಳಗಿನ ಆಯ್ಕೆಗಳಲ್ಲಿ ನಿಮಗೆ ಯಾವ ಕಾನೂನು ಅನ್ವಯಿಸಬಹುದು ಎಂದು ನೀವು ಸಂದರ್ಭಾನುಸಾರ ನಿರ್ಧರಿಸಕೊಳ್ಳಬಹುದು.
ನೀವು ಹಿಂದೂ, ಬೌದ್ಧ, ಜೈನ ಅಥವಾ ಸಿಖ್ ಆಗಿದ್ದಲ್ಲಿ:
ನೀವು ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಆಗಿದ್ದಲ್ಲಿ (ಸಾಮೂಹಿಕವಾಗಿ ಈ ಸಮುದಾಯಗಳನ್ನು ಕಾನೂನು “ಹಿಂದೂ” ಎಂದು ಪರಿಗಣಿಸುತ್ತದೆ), ಹಿಂದೂ ದತ್ತು ಸ್ವೀಕಾರ ಕಾನೂನು ಎಂದು ಕರೆಯಲ್ಪಡುವ “ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬” ನಿಮಗೆ ಅನ್ವಯಿಸುತ್ತದೆ. ಈ ಕಾಯಿದೆ, ಹಿಂದೂ ಮಕ್ಕಳ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ, ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ.
ಇನ್ನಿತರ ಧರ್ಮಗಳು:
ನೀವು ಧಾರ್ಮಿಕ ಕಾನೂನಿನಡಿ ದತ್ತು ಸ್ವೀಕಾರ ಮಾಡಲು ಇಚ್ಛಿಸದಿದ್ದಲ್ಲಿ/ಆಗದಿದ್ದಲ್ಲಿ, ಸಾರ್ವತ್ರಿಕ ದತ್ತು ಸ್ವೀಕಾರ ಕಾನೂನಾದ “ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫” ರ ಅಡಿಯಲ್ಲಿ ದತ್ತು ಸ್ವೀಕಾರ ಮಾಡಬಹುದು. ಈ ಕಾನೂನಿನಡಿ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ (ಹಿಂದೂ, ಪರಿಶಿಷ್ಟ ಪಂಗಡಗಳು, ಇತ್ಯಾದಿ ಸೇರಿದಂತೆ) ದತ್ತು ಸ್ವೀಕಾರ ಮಾಡಬಹುದು.
ನೀವು ಯಾವ ಕಾನೂನನ್ನು ಅಳವಡಿಸಬೇಕು ಎಂದು ತೀರ್ಮಾನಿಸಲು ಕೆಳಗಿನ ಟೇಬಲ್ ನೋಡಿ:
ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬ (ಹಿಂದೂ ಕಾನೂನು) | ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ (ಧಾರ್ಮಿಕೇತರ ಕಾನೂನು) |
ದತ್ತು ಪಡೆಯುವ ತಂದೆ–ತಾಯಿ ಕೇವಲ ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿರಬಹುದು. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ. | ದತ್ತು ಪಡೆಯುವ ತಂದೆ–ತಾಯಿ ಯಾವುದೇ ಧರ್ಮ, ಜಾತಿ, ಅಥವಾ ಪಂಗಡಕ್ಕೆ ಸೇರಿರಬಹುದು. |
ಕೇವಲ ಹಿಂದೂ ಮಕ್ಕಳನ್ನು ದತ್ತು ಪಡೆಯಬಹುದು. | ಯಾವುದೇ ಧರ್ಮಕ್ಕೆ ಸೇರಿದ ಮಗುವನ್ನು ದತ್ತು ಪಡೆಯಬಹುದು. |
೧೫ ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. | ೧೮ ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. |
ಕಾಯಿದೆಯಲ್ಲಿ ದತ್ತು ಸ್ವೀಕಾರದ ಪ್ರಕ್ರಿಯೆ ವಿವರವಾಗಿ ಕೊಟ್ಟಿಲ್ಲವಾದ ಕಾರಣ, ಸಾಮಾನ್ಯವಾಗಿ ಒಂದು ಕರಾರುಪತ್ರವನ್ನು ಕಾರ್ಯಗತಗೊಳಿಸಲಾಗುತ್ತದೆ. | ಬೇರೆ–ಬೇರೆ ವ್ಯಕ್ತಿಗಳಿಗೆ ಅನ್ವಯಿಸುವ ದತ್ತು ಸ್ವೀಕಾರದ ವಿಭಿನ್ನ ಪ್ರಕ್ರಿಯೆಗಳಿವೆ:
೧. ನಿವಾಸಿ ಭಾರತೀಯರಿಂದ ದತ್ತು ಸ್ವೀಕಾರ ೨. ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ ೩. ಭಾರತದ ಸಾಗರೋತ್ತರ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವುದು ೪. ಭಾರತದ ಸಾಗರೋತ್ತರ ನಾಗರಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ವಾಸಿಸುವ ವಿದೇಶಿಯರು ದತ್ತು ಸ್ವೀಕಾರ ಮಾಡುವುದು ೫. ಮಲ ತಂದೆ–ತಾಯಂದಿರಿಂದ ದತ್ತು ಸ್ವೀಕಾರ ೬. ನೆಂಟರಿಂದ ದತ್ತು ಸ್ವೀಕಾರ |