ಹಲವು ಸಂದರ್ಭಗಳಲ್ಲಿ, ಕೇವಲ ಪತಿ ಯಾ ಪತ್ನಿಗೆ ಮಾತ್ರ ವಿಚ್ಛೇದನ ಬೇಕು ಎಂದು ಎನಿಸುವುದುಂಟು. ಕಾನೂನಿನಡಿ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಇಂತಹ ಏಕಪಕ್ಷೀಯ ವಿಚ್ಛೇದನ ಲಭಿಸುತ್ತದೆ. ಉದಾಹರಣೆಗೆ, ವಿವಾಹದಲ್ಲಿ ದೌರ್ಜನ್ಯ/ಕ್ರೌರ್ಯ ಇದ್ದಾಗ, ಅಥವಾ ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ. ಇಂತಹ ಸಂದರ್ಭಗಳಲ್ಲಿ, ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಸಂಗಾತಿ ಈ ಆರೋಪಗಳನ್ನು ನಿರಾಕರಿಸಿ, ಅವರಿಗೆ ಯಾಕೆ ಈ ವಿಚ್ಛೇದನಕ್ಕೆ ಒಪ್ಪಿಗೆ ಇಲ್ಲ ಎಂದು ಕೋರ್ಟಿಗೆ ಹೇಳಬಹುದಾಗಿದೆ.
ಕಾನೂನಿನಡಿಯಲ್ಲಿ, ಮದುವೆಯಾಗಿ ಒಂದು ವರ್ಷವಾದ ನಂತರ ಮಾತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಒಂದು ವರ್ಷದ ಸಮಯ:
ನಿಮಗೆ ವಿಚ್ಛೇದನದ ಅರ್ಜಿ ಸಲ್ಲಿಸುವುದಿದ್ದಲ್ಲಿ, ನಿಮ್ಮ ಮದುವೆಯಾದ ದಿನಾಂಕದಿಂದ ಹಿಡಿದು ಒಂದು ವರ್ಷದ ವರೆಗೆ ನೀವು ಕಾಯಬೇಕಾಗುತ್ತದೆ. ಉದಾಹರಣೆಗೆ, ಜಿತೇಂದ್ರ ಹಾಗು ವಹೀದಾ ಜನೆವರಿ ೯, ೨೦೧೮ರಂದು ಮದುವೆಯಾದರು. ಜಿತೇಂದ್ರ ಕಡೆ ಪಕ್ಷ ಜನೆವರಿ ೯, ೨೦೧೯ರ ವರೆಗೆ ವಿಚ್ಛೇದನದ ಅರ್ಜಿ ಸಲ್ಲಿಸಲು ಕಾಯಬೇಕಾಗುತ್ತದೆ.
ಒಂದು ವರ್ಷದ ನಿಯಮಕ್ಕೆ ಅಪವಾದಗಳು:
ಕಾನೂನಿನಡಿಯಲ್ಲಿ ಮದುವೆಯ ನಂತರ ಒಂದು ವರ್ಷದ ಬಳಿಕ ಮಾತ್ರವೇ ವಿಚ್ಛೇದನ ಸಿಗುವುದಾದರೂ, ಈ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ:
- ಅಸಾಧಾರಣ ಕಷ್ಟ ಅನುಭವಿಸುತ್ತಿದ್ದಲ್ಲಿ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ದಿನವೂ ನಿಮಗೆ ಶಾರೀರಿಕವಾಗಿ ಕಿರುಕುಳ ಕೊಡುತ್ತಿದ್ದಲ್ಲಿ, ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.
- ಅಸಾಧಾರಣ ನೈತಿಕ ಭ್ರಷ್ಟತೆ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ಅವಮಾನಕರ ಲೈಂಗಿಕ ಕ್ರಿಯೆಗಳನ್ನು ಮಾಡುವುದಾಗಿ ನಿಮ್ಮನ್ನು ಪೀಡಿಸುತ್ತಿದ್ದಲ್ಲಿ , ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.