ಕೋರ್ಟಿನ ಆದೇಶದ ಮೇರೆಗೆ ನಿಮಗೆ ಒಂದು ನಿರ್ದಿಷ್ಟವಾದ ಹಣದ ಮೊತ್ತ ನಿಮ್ಮ ಸಂಗಾತಿಯಿಂದ ದೊರಕಬಲ್ಲದು. ಇದು ನಿಮ್ಮ ಅಥವಾ ನಿಮ್ಮ ಮಕ್ಕಳ ಜೀವನೋಪಾಯಕ್ಕೆ ಯಾವ ಆದಾಯದ ಮೂಲವೂ ಇಲ್ಲದಿದ್ದಾಗ ಮಾತ್ರ ನಿಮಗೆ ದೊರೆಯಬಲ್ಲದು. ಈ ಹಣದ ಮೊತ್ತಕ್ಕೆ ಜೀವನಾಂಶ ಎಂದು ಕರೆಯುತ್ತಾರೆ. ಹಿಂದೂ ವಿಚ್ಛೇದನ ಕಾಯಿದೆ ಅಡಿಯಲ್ಲಿ ಜೀವನಾಂಶ ಲಿಂಗ-ತಟಸ್ಥವಾಗಿದೆ. ಅಂದರೆ, ತಾತ್ಕಾಲಿಕ ಅಥವಾ ಶಾಶ್ವತ ಜೀವನಾಂಶದ ಅರ್ಜಿ ಗಂಡ ಅಥವಾ ಹೆಂಡತಿ ಇಬ್ಬರೂ ಸಲ್ಲಿಸಬಹುದು.
ತಾತ್ಕಾಲಿಕ ಜೀವನಾಂಶ:
ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯಬೇಕಾದರೆ ನಿಮ್ಮ ಸ್ವಂತಕ್ಕೆ ಹಾಗು/ಅಥವಾ ಮಕ್ಕಳ ಪಾಲನೆ ಪೋಷಣೆಗೆ, ಅಥವಾ ಪ್ರಕರಣದ ಖರ್ಚು-ವೆಚ್ಚಕ್ಕೆ ನಿಮ್ಮ ಹತ್ತಿರ ಆದಾಯವಿಲ್ಲವಾದಲ್ಲಿ ನಿಮ್ಮ ಸಂಗಾತಿ ನಿಮಗೆ ಜೀವನಾಂಶ ನೀಡಬೇಕೆಂದು ಕೋರ್ಟಿಗೆ ನೀವು ಅರ್ಜಿ ಸಲ್ಲಿಸಬಹುದು. ಹೀಗಿದ್ದಾಗ ನ್ಯಾಯಾಲಯವು, ನಿಮ್ಮ ಸಂಗಾತಿಯ ಆದಾಯ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಒಂದು ಸಮಂಜಸವಾದ ಮೊತ್ತವನ್ನು ನಿರ್ಧರಿಸುತ್ತದೆ. ಈ ಮೊತ್ತವನ್ನು ನಿಮಗೆ ಮಾಸಿಕ ಜೀವನಾಂಶವೆಂದು ತಾತ್ಕಾಲಿಕವಾಗಿ ನೀಡುವುದಾಗಿ ನ್ಯಾಯಾಲಯವು ನಿರ್ದೇಶಿಸುತ್ತದೆ.
ಶಾಶ್ವತವಾದ ಜೀವನಾಂಶ:
ವಿಚ್ಛೇದನದ ಅರ್ಜಿಯ ಜೊತೆಗೆ ನಿಮಗೆ ಮಾಸಿಕವಾಗಿ, ನಿಯತಕಾಲಿಕವಾಗಿ, ಅಥವಾ ಒಮ್ಮೆಲೇ ಭಾರಿ ಮೊತ್ತವಾಗಿ ನಿಮ್ಮ ಸಂಗಾತಿಯಿಂದ ಜೀವನಾಂಶ ಬೇಕು ಎಂದು ನೀವು ಕೋರ್ಟಿಗೆ ಅರ್ಜಿ ಸಲ್ಲಿಸಬಹುದು.
ನ್ಯಾಯಾಲಯವು ನಿಮ್ಮ ವೈವಾಹಿಕ ಜೀವನದ ಜೀವನಶೈಲಿ ಹಾಗು ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಇಂತಹ ಶಾಶ್ವತವಾದ ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ. ಭವಿಷ್ಯದಲ್ಲಿ ನಿಮ್ಮ ಜೀವನಶೈಲಿ ಅಥವಾ ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿ ಬದಲಾದರೆ, ಈ ಜೀವಾಂಶದ ಮೊತ್ತವು ಕೂಡ ಬದಲಾಗಬಲ್ಲದು. ಉದಾಹರಣೆಗೆ, ನಿಮ್ಮ ಮಕ್ಕಳ ಶೈಕ್ಷಣಿಕ ಖರ್ಚು ಹೆಚ್ಚಾದಲ್ಲಿ, ನಿಮ್ಮ ಸಂಗಾತಿಯ ಆದಾಯ ಹೆಚ್ಚಾದಲ್ಲಿ ಅಥವಾ ಜೀವನಶೈಲಿ ಸುಧಾರಿಸಿದಲ್ಲಿ, ಅವರು ನಿಮಗೆ ಕೊಡತಕ್ಕದ್ದ ಜೀವನಾಂಶದ ಮೊತ್ತವೂ ಕೂಡ ಹೆಚ್ಚಾಗುತ್ತದೆ.
ನಿಮಗೆ ಮಾಸಿಕವಾಗಿ ಅಥವಾ ನಿಯತಕಾಲಿಕವಾಗಿ ಜೀವನಾಂಶ ಸಿಗುತ್ತಿದ್ದಲ್ಲಿ, ಅದು ನೀವು ಪುನರ್ವಿವಾಹವಾಗುವ ತನಕ ಮಾತ್ರ ನಿಮಗೆ ಸಿಗುತ್ತದೆ. ವಿಚ್ಛೇದನದ ನಂತರ ನೀವು ಇನ್ನೋರ್ವ ವ್ಯಕ್ತಿಯ ಸಂಗಡ ಲೈಂಗಿಕ ಸಂಬಂಧ ಬೆಳೆಸಿಕೊಂಡರೆ ಈ ಜೀವನಾಂಶವನ್ನು ರದ್ದು ಪಡಿಸಲೂಬಹುದು.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಮುಖ್ಯ ಮನವಿಯಾದ ವಿಚ್ಛೇದನ/ ನ್ಯಾಯಿಕ ಬೇರ್ಪಡೆಯನ್ನು ನ್ಯಾಯಾಲಯವು ವಜಾಮಾಡಿದ್ದಲ್ಲಿ, ಅಥವಾ ನೀವೇ ಹಿಂತೆಗೆದುಕೊಂಡಿದ್ದಲ್ಲಿ, ನಿಮಗೆ ಶಾಶ್ವತವಾದ ಜೀವನಾಂಶ ಸಿಗಲಾರದು.