LGBTQ+ ವ್ಯಕ್ತಿಗಳಿಗೆ ಮತದಾರರ ಗುರುತಿನ ಚೀಟಿ

ಕೊನೆಯ ಅಪ್ಡೇಟ್ Jan 7, 2026

ಮತದಾರರ ಛಾಯಾ ಚಿತ್ರದ ಗುರುತಿನ ಚೀಟಿ (EPIC) ಎಂದೂ ಕರೆಯಲ್ಪಡುವ ಮತದಾರರ ಗುರುತಿನ ಚೀಟಿಯು ಭಾರತದ ಚುನಾವಣಾ ಆಯೋಗದಿಂದ (ECI) ಮತ ಚಲಾಯಿಸಲು ಅರ್ಹರಾಗಿರುವ ಎಲ್ಲಾ ನಾಗರಿಕರಿಗೆ ನೀಡಲಾದ ಫೋಟೋ ಗುರುತಿನ ಚೀಟಿಯಾಗಿದೆ.1 ಈ ಕಾರ್ಡ್ ಅನ್ನು ಸಾಮಾನ್ಯವಾಗಿ ಇತರ ಹೆಸರುಗಳಿಂದಲೂ ಕರೆಯಲಾಗುತ್ತದೆ ಉದಾಹರಣೆಗೆ ಚುನಾವಣಾ ಕಾರ್ಡ್, ಮತದಾರರ ಚೀಟಿ, ಮತದಾರರ ಗುರುತಿನ ಚೀಟಿ ಇತ್ಯಾದಿ.

 ಹೊಸ ಮತದಾರರ ಗುರುತಿನ ಚೀಟಿ

ಭಾರತದಲ್ಲಿ ಮತದಾರರಾಗಿ ನೋಂದಾಯಿಸಲು ಅರ್ಜಿ ನಮೂನೆಯಾದ ಅರ್ಜಿ 6 ಅನ್ನು ಭರ್ತಿ ಮಾಡುವ ಮೂಲಕ ನೀವು ಖುದ್ದಾಗಿ ಅಥವಾ ಆನ್‌ಲೈನ್‌ನಲ್ಲಿ ಹೊಸ ಮತದಾರರ ಗುರುತಿನ ಚೀಟಿಗಾಗಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ನೀವು ಮತದಾರರಾಗಲು ಇರುವ ಎಲ್ಲಾ ಅರ್ಹತೆಗಳನ್ನೂ ಪೂರೈಸಿದರೆ, ನಿರ್ದಿಷ್ಟ ಕ್ಷೇತ್ರದ ಮತದಾರರ ಹೆಸರುಗಳ ಪಟ್ಟಿಯಾಗಿರುವ ‘ಮತದಾರರ ಪಟ್ಟಿ’ಗೆ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ. ಹೊಸ ಮತದಾರರ ಗುರುತಿನ ಚೀಟಿಯನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯಲು, ಇಲ್ಲಿ ಓದಿ.

  •  ಹೆಸರು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ಬದಲಾಯಿಸಿದ್ದರೆ, ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ಹೆಸರನ್ನು ಭರ್ತಿ ಮಾಡಬಹುದು. ಚುನಾವಣಾ ಅಧಿಕಾರಿಗಳಿಗೆ ಅಗತ್ಯವಿದ್ದರೆ  ನೀವು ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ಬದಲಾದ ಹೆಸರಿನ ಪ್ರತಿಯನ್ನು ಒಯ್ಯಬೇಕು.
  • ಲಿಂಗ ವಿವರಗಳು: ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳುವಾಗ ಲಿಂಗಕ್ಕೆ, “ಪುರುಷ”, “ಸ್ತ್ರೀ” ಮತ್ತು “ತೃತಿಯಲಿಂಗಿ” ಎಂಬ ಮೂರು ಆಯ್ಕೆಗಳಿವೆ. ಈ ಆಯ್ಕೆಯು ಭಾರತದಾದ್ಯಂತ ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಎಲ್ಲಾ ಕಚೇರಿಗಳಲ್ಲಿ ಮತ್ತು ಅರ್ಜಿ ನಮೂನೆಯಲ್ಲಿ ನಿಮಗೆ ಲಭ್ಯವಿದೆ.

ಮತದಾರರ ಗುರುತಿನ  ಚೀಟಿ ವಿವರಗಳನ್ನು ನವೀಕರಿಸುವುದು / ಬದಲಾಯಿಸುವುದು

ನಿಮ್ಮ ಮತದಾರರ ಗುರುತಿನ ಚೀಟಿಯ ವ್ಯಕ್ತಿಗತ ಮಾಹಿತಿಯನ್ನು ನೀವು ನವೀಕರಿಸಬಹುದು ಮತ್ತು ನವೀಕರಿಸಿದ ಮಾಹಿತಿಯನ್ನು ಹೊಂದಿರುವ ಹೊಸದಾಗಿ ನೀಡಲಾದ ಕಾರ್ಡ್ ಅನ್ನು ಸ್ವೀಕರಿಸಬಹುದು. ಮತದಾರರ ಗುರುತಿನ ಚೀಟಿ ವಿವರಗಳನ್ನು ಹೇಗೆ ನವೀಕರಿಸುವುದು ಎಂಬುದನ್ನು ವಿವರವಾಗಿ ತಿಳಿಯಲು ಇಲ್ಲಿ ಓದಿ.

  • ನಿಮ್ಮ ಹೆಸರನ್ನು ಬದಲಾಯಿಸುವುದು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ನವೀಕರಿಸಲು ನೀವು ಬಯಸಿದರೆ, ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ಹೆಸರನ್ನು ಭರ್ತಿ ಮಾಡಬಹುದು. ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ಪ್ರತಿಯನ್ನು ಮತ್ತು ನಿಮ್ಮ ಹೊಸ ಹೆಸರನ್ನು ಗುರುತಿಸುವ ಇತರ ಗುರುತಿನ ಪುರಾವೆಗಳ ಪ್ರತಿಯನ್ನು ನೀವು ಒಯ್ಯಬೇಕು.
  • ಲಿಂಗ ವಿವರಗಳನ್ನು ಬದಲಾಯಿಸುವುದು: ನಿಮ್ಮ ಲಿಂಗವನ್ನು ನವೀಕರಿಸಲು ನೀವು ಬಯಸಿದರೆ, “ಪುರುಷ”, “ಸ್ತ್ರೀ” ಮತ್ತು “ತೃತೀಯಲಿಂಗಿ” (ಮೂರನೇ ಲಿಂಗ) ಎಂಬ ಮೂರು ಆಯ್ಕೆಗಳಿಂದ ನೀವು ಗುರುತಿಸಬಹುದು. ಈ ಆಯ್ಕೆಯು ನಿಮಗೆ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ ಮತ್ತು ಅರ್ಜಿ ನಮೂನೆಯಲ್ಲಿ ಲಭ್ಯವಿದೆ.

ಚುನಾವಣಾ ಅಧಿಕಾರಿಗಳು ನಿಮ್ಮನ್ನು ಲಿಂಗ ಗುರುತಿನ ಪುರಾವೆ ಅಥವಾ ಹೆಸರು ಬದಲಾವಣೆಯ ಪುರಾವೆಗಳನ್ನು ಕೇಳಬಹುದು, ಆದರೆ ಅವರು ನಿಮ್ಮನ್ನು ಯಾವುದೇ ರೀತಿಯ ಕಿರುಕುಳ ಅಥವಾ ಲಿಂಗ ಪರಿಶೀಲನೆಗೆ ಸ್ಥಳದಲ್ಲೇ ಒಳಪಡಿಸಲು ಸಾಧ್ಯವಿಲ್ಲ. ನೀವು ಯಾವುದೇ ಕಿರುಕುಳ ಅಥವಾ ತಾರತಮ್ಯವನ್ನು ಎದುರಿಸಿದರೆ, ನೀವು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಬೇಕು. ಈ ಅಧಿಕಾರಿಗಳು ಸ್ಪಂದಿಸದಿದ್ದರೆ, ನೀವು ವಕೀಲರು, NGOಇತ್ಯಾದಿಗಳ ಸಹಾಯವನ್ನು ಪಡೆದು ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು ಮತ್ತು ಪೊಲೀಸರಿಗೆ ದೂರು ನೀಡುವ ಮೂಲಕ ಕ್ರಮ ಕೈಗೊಳ್ಳಬಹುದು.

                1.ಸೆಕ್ಷನ್ 61(ಬಿ), ಜನರ ಪ್ರಾತಿನಿಧ್ಯ ಕಾಯಿದೆ, 1951; ನಿಯಮ 28(2), ಮತದಾರರ ನೋಂದಣಿ ನಿಯಮಗಳು, 1960. []

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.