ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ, ಪುರಸಭೆ ಅಥವಾ ಪಂಚಾಯತಿಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಮಲ ಹೊರುವ ಪದ್ಧತಿ ಆಚರಣೆಯಲ್ಲಿದೆ ಎಂದು ಅನುಮಾನ ಬಂದಲ್ಲಿ, ಸಮೀಕ್ಷೆ ನಡೆಸಿ, ಮಲ ಹೊರುವವರ ಪಟ್ಟಿಯನ್ನು ತಯಾರಿಸಬೇಕು. ಈ ಪಟ್ಟಿಯಲ್ಲಿರುವವರ ಪುನರ್ವಸತಿಯ ಜವಾಬ್ದಾರಿ ಸಂಬಂಧಪಟ್ಟ ಪುರಸಭೆ ಅಥವಾ ಪಂಚಾಯತಿಯದ್ದಾಗಿದೆ. ಕಾನೂನುಬದ್ಧವಾಗಿ ಮಲ ಹೊರುವವರ ಪುನರ್ವಸತಿ ಮಾಡಿಸುವುದು ಆ ಜಿಲ್ಲೆಯ ಜಿಲ್ಲಾಧಿಕಾರಿಗಳ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಗಳು ಅಥವಾ ರಾಜ್ಯ ಸರ್ಕಾರವು ಕೆಲ ಜವಾಬ್ದಾರಿಗಳನ್ನು ಪುರಸಭೆಯ ಕೆಳಮಟ್ಟದ ಅಧಿಕಾರಿಗಳಿಗೆ ನಿಯೋಜಿಸಬಹುದು. ಪುನರ್ವಸತಿಯ ಪ್ರಕ್ರಿಯೆ ಕೆಳಕಂಡಂತಿದೆ:
- ತಕ್ಷಣದ ಸಹಾಯ: ೧ ತಿಂಗಳೊಳಗೆ ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ಹಣ ಕೊಡುವುದು.
- ಮಕ್ಕಳ ಶಿಕ್ಷಣ: ಅವರ ಮಕ್ಕಳಿಗೆ ಸರ್ಕಾರಿ ವಿದ್ಯಾರ್ಥಿವೇತನ ಕೊಡಿಸುವುದು
- ಆಸ್ತಿ: ಜಮೀನನ್ನು ಒದಗಿಸಿ, ಆ ಜಮೀನಿನ ಮೇಲೆ ಮನೆ ಕಟ್ಟಿಸುವುದಕ್ಕಾಗಿ, ಅಥವಾ ಈಗಾಗಲೇ ಕಟ್ಟಿದ ಮನೆಯನ್ನು ಕೊಳ್ಳುವುದಕ್ಕೆ ದುಡ್ಡು ಕೊಡಲು ಸರ್ಕಾರ ಯೋಜನೆಗಳನ್ನು ಬಿಡುಗಡೆ ಮಾಡಬೇಕು
- ಇನ್ನಿತರ ಉದ್ಯೋಗಗಳಿಗೆ ತರಬೇತಿ ನೀಡುವುದು: ಇನ್ನಿತರ ಕೌಶಲ್ಯಗಳ ತರಬೇತಿಯನ್ನು ಸಂಬಂಧಪಟ್ಟ ವ್ಯಕ್ತಿ ಅಥವಾ ಅವರ ಪರಿವಾರದ ಇನ್ನೋರ್ವ ವಯಸ್ಕ ಸದಸ್ಯರಿಗೆ ನೀಡುವುದು
- ಸಾಲ: ಮಲ ಹೊರುವವರು ಅಥವಾ ಅವರ ಕುಟುಂಬದ ವಯಸ್ಕ ಸದಸ್ಯರು ಇನ್ನೋರ್ವ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಲು ಸಾಹಾಯವಾಗುವಂತೆ ಸಹಾಯಧನ ಅಥವಾ ಕಡಿಮೆ ಬಡ್ಡಿಯ ಸಾಲಗಳನ್ನು ಒದಗಿಸುವಂತಹ ಯೋಜನೆಗಳನ್ನು ಸರ್ಕಾರ ಹೊರತರಬೇಕು
- ಇನ್ನಿತರ ಸಹಾಯ: ಬೇರೆ ಯಾವ ರೀತಿಯ ಕಾನೂನಾತ್ಮಕ ಅಥವಾ ಇನ್ನಿತರ ಸಹಾಯವನ್ನೂ ಮಾಡಲು ಸರ್ಕಾರ ಮುಂದೆ ಬರಬಹುದು
- ಸರ್ಕಾರಿ ಯೋಜನೆಗಳು: “ಮಲ ಹೊರುವವರ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆ” ಎಂಬ ಯೋಜನೆಯನ್ನು ಕೇಂದ್ರ ಸರ್ಕಾರಸ್ಥಾಪಿಸಿದೆ. ಹಾಗು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ರಾಜ್ಯ ಮಟ್ಟದ ಸಂಪರ್ಕ ಸಂಸ್ಥೆಗಳ ಮೂಲಕ ಅನೇಕ ಸಾಲ ಯೋಜನೆಗಳನ್ನು ಹೊರತಂದಿದೆ.