ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ವಿಚ್ಛೇದನ ಬೇಕೆನಿಸಿದ್ದಲ್ಲಿ, ಪರಸ್ಪರ ಒಪ್ಪಿಗೆಯ ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಬಹುದು.
ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಪರಿಸ್ಥಿತಿಗಳಲ್ಲಿ ಕೋರ್ಟಿನ ಮೊರೆ ಹೋಗಬಹುದು:
- ನೀವು ಒಂದು ವರ್ಷ ಬೇರೆ-ಬೇರೆಯಾಗಿ ವಾಸ ಮಾಡುತ್ತಿದ್ದರೆ
- ನೀವಿಬ್ಬರೂ ಜೊತೆಯಲ್ಲಿ ಇರಲಾರದಂತಿದ್ದರೆ
- ನೀವಿಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದಲ್ಲಿ
ಕಾನೂನಿನಡಿಯಲ್ಲಿ ಇಂತಹ ವಿಚ್ಛೇದನ ಕೇವಲ ಮದುವೆಯಾಗಿ ಒಂದು ವರ್ಷದ ನಂತರವೇ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ ಮೇಲೆಯೂ ಸಹ, ಕೋರ್ಟು ನಿಮಗೆ ಕನಿಷ್ಠ ೬ ತಿಂಗಳಿಂದ ಗರಿಷ್ಟ ೧೮ ತಿಂಗಳುಗಳ ಕಾಲ ಪರಸ್ಪರ ರಾಜಿಯಾಗಲು ಕೊಡುತ್ತದೆ – ಇದು ನಿಜವಾಗಿಯೂ ನಿಮಗೆ ವಿಚ್ಛೇದನ ಬೇಕಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ.
ಹೀಗಿದ್ದರೂ ಸಹ, ವಿಚ್ಛೇದನಕ್ಕೆ ಕಾಯಬೇಕಾದ ಕನಿಷ್ಠ ೬ ತಿಂಗಳ ಕಾಲವನ್ನೂ ಸಹ ಕೋರ್ಟುಗಳು ಎಷ್ಟೋ ಸಲ ಈ ಕೆಳಗಿನ ಸಂದರ್ಭಗಳಲ್ಲಿ ಮನ್ನಾ ಮಾಡಿವೆ:
- ನೀವು ಹಾಗು ನಿಮ್ಮ ಸಂಗಾತಿ ಮರಳಿ ಒಂದಾಗಲು ಸಾಧ್ಯವೇ ಇಲ್ಲದಿದ್ದಾಗ
- ಎಲ್ಲ ಮಧ್ಯಸ್ಥಿಕೆ ಹಾಗು ಸಂಧಾನದ ಪ್ರಯತ್ನಗಳು ವಿಫಲವಾದಾಗ
- ವಿಚ್ಛೇದನದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಟ್ಟುವ ಸಮಸ್ಯೆಗಳನ್ನು ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ಪರಿಹರಿಸಿದಾಗ. ಉದಾಹರಣೆ: ಜೀವನಾಂಶ ಕೊಡುವುದು, ಮಕ್ಕಳ ಹೊಣೆಗಾರಿಕೆ
- ೬ರಿಂದ ೧೮ ತಿಂಗಳುಗಳವರೆಗೆ ಕಾಯುವುದು ನಿಮಗೆ ಇನ್ನೂ ಹೆಚ್ಚು ಸಂಕಟ ಹಾಗು ದುಃಖ ಕೊಡುವಂತಿದ್ದರೆ
- ನೀವು ನಿಮ್ಮ ಸಂಗಾತಿಯಿಂದ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಲ್ಲಿ, ನಂತರ ನೀವಿಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆಯುವುದಾಗಿ ನಿರ್ಧರಿಸಿದ್ದಲ್ಲಿ.