ಪೋಲೀಸ್
- ಅತ್ಯಾಚಾರದ ಅಪರಾಧ ಜರುಗಿದ್ದರೆ, ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸುವ ಮೂಲಕ ಪೊಲೀಸರಿಗೆ ವರದಿ ಮಾಡುವುದು ಮೊದಲ ಮತ್ತು ಪ್ರಮುಖ ಕರ್ತವ್ಯವಾಗಿದೆ.13 ಇಲ್ಲವಾದರೆ, 1091 (ಮಹಿಳಾ ಸಹಾಯವಾಣಿ ಸಂಖ್ಯೆ) ಗೆ ಕರೆ ಮಾಡಿ ಮತ್ತು ಅತ್ಯಾಚಾರದ ಕುರಿತು ವರದಿ ಮಾಡಿ.
ಯಾರಾದರೂ ಅಪರಾಧವನ್ನು ತಕ್ಷಣವೇ ವರದಿ ಮಾಡದಿದ್ದರೂ, ವಿಳಂಬವಾದ FIR ಪ್ರಕರಣಕ್ಕೆ ಹಾನಿ ಮಾಡುತ್ತದೆ ಎಂದು ಇದರ ಅರ್ಥವಲ್ಲ. ತನಿಖೆ ನಡೆಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರಿಗೆ ಕಷ್ಟವಾಗಬಹುದು, ಆದರೆ ನಂತರದ ದಿನಾಂಕದಲ್ಲೂ FIR ದಾಖಲಿಸಲು ಸಾಧ್ಯವಿದೆ.
- FIR ದಾಖಲಿಸಲು, ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ. ಪೊಲೀಸ್ ಠಾಣೆ ಅಪರಾಧ ನಡೆದ ಜಾಗದಲ್ಲೇ ಇರಬೇಕೆಂದೇನೂ ಇಲ್ಲ. ಪೊಲೀಸ್ ಠಾಣೆಯನ್ನು ಪತ್ತೆಹಚ್ಚಲು, ‘ಇಂಡಿಯನ್ ಪೊಲೀಸ್ ಅಟ್ ಯುವರ್ ಕಾಲ್’ ಆ್ಯಪ್ ಡೌನ್ಲೋಡ್ ಮಾಡಿ ಮತ್ತು ಹತ್ತಿರದ ಪೊಲೀಸ್ ಠಾಣೆಯನ್ನು ಪತ್ತೆ ಮಾಡಿ. ಇಲ್ಲದಿದ್ದರೆ, 100 ಗೆ ಕರೆ ಮಾಡಿ.
- ಹಲ್ಲೆಗೊಳಗಾದ ತಕ್ಷಣ ಪೊಲೀಸರನ್ನು ಸಂಪರ್ಕಿಸುವುದು, ಈಗಾಗಲೇ ಎದೆಗುಂದಿರುವ ಸಂತ್ರಸ್ತರಿಗೆ ತುಂಬಾ ಕಷ್ಟವಾಗಬಹುದು. ಆದಾಗ್ಯೂ,ಸಂತ್ರಸ್ತರು ಇನ್ನು ಹೆದರಬೇಕಾಗಿಲ್ಲ. ಮಹಿಳೆಯು ಸ್ನೇಹಿತರ ಸಹಾಯವನ್ನು ಪಡೆಯಬಹುದು ಅಥವಾ ದೂರು ಸಲ್ಲಿಸಲು ಸಹಾಯ ಮಾಡಲು ವಕೀಲರನ್ನು ಸಂಪರ್ಕಿಸಬಹುದು. ವಾಸ್ತವವಾಗಿ, ಮಹಿಳೆ ಸ್ವತಃ ಪೊಲೀಸರನ್ನು ಸಂಪರ್ಕಿಸಲು ಬಯಸದಿದ್ದರೆ ಇನ್ನೊಬ್ಬ ವ್ಯಕ್ತಿಯ ಮುಖಾಂತರ ದೂರು ದಾಖಲಿಸಬಹುದು.14 ಸಂತ್ರಸ್ತರು ತನ್ನ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದರೆ, ಮಾಹಿತಿಯನ್ನು ಮಹಿಳಾ ಅಧಿಕಾರಿ ಮಾತ್ರ ದಾಖಲಿಸಿಕೊಳ್ಳುತ್ತಾರೆ.
- ಸಂತ್ರಸ್ತೆಯು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಶಕ್ತರಾಗಿದ್ದರೆ, ಪೋಲೀಸರು ಬಂದು ಆಕೆಯ ನಿವಾಸದಿಂದ ಅಥವಾ ಆಕೆಗೆ ಆರಾಮದಾಯಕವಾದ ಯಾವುದೇ ಸ್ಥಳದಿಂದ ದೂರನ್ನು ತೆಗೆದುಕೊಳ್ಳುತ್ತಾರೆ.15 ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ನಿವಾಸದಲ್ಲಿ ಅಥವಾ ಆಕೆಯ ಆಯ್ಕೆಯ ಯಾವುದೇ ಸ್ಥಳದಲ್ಲಿ ದಾಖಲಿಸಲಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ, ಮಹಿಳಾ ಪೋಲೀಸ್ ಅಧಿಕಾರಿಯೊಬ್ಬರು ಸಂತ್ರಸ್ತೆಯ ಪಾಲಕರ/ಪೋಷಕರ/ಹತ್ತಿರದ ಸಂಬಂಧಿಕರ/ಪ್ರದೇಶದ ಸಾಮಾಜಿಕ ಕಾರ್ಯಕರ್ತರ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸುತ್ತಾರೆ.16
- ಸಂತ್ರಸ್ತೆಯು ದಾಳಿಯ ಅಥವಾ ಒಂದೊಮ್ಮೆ ಆಕ್ರಮಣಕಾರರ ನಿರ್ದಿಷ್ಟ ವಿವರಗಳನ್ನೂ ಸಹಾ ಸಂಪೂರ್ಣವಾಗಿ ನೆನಪಿಟ್ಟುಕೊಳ್ಳದಿದ್ದರೆ, ತನಗೆ ನೆನಪಿರುವಷ್ಟು ವಿವರಗಳನ್ನು ಪೊಲೀಸರಿಗೆ ಹೇಳಿದರೆ ಸಾಕು.
- ಪೊಲೀಸರು ದೂರನ್ನು ಓದಿದ ನಂತರ, ಎಲ್ಲಾ ವಿವರಗಳೂ ಸರಿಯಾಗಿದ್ದರೆ, ದೂರುದಾರರು FIR ಗೆ ಸಹಿ ಮಾಡುತ್ತಾರೆ.17 ಯಾವುದೇ ಪೊಲೀಸ್ ಅಧಿಕಾರಿ FIR ದಾಖಲಿಸಲು ನಿರಾಕರಿಸಿದರೆ ಅಥವಾ ಅಪರಾಧದ ಮಾಹಿತಿಯನ್ನು ಲಿಖಿತವಾಗಿ ಮತ್ತು ಅಂಚೆ ಮೂಲಕ ದಾಖಲಿಸಲು ವಿಫಲವಾದರೆ ಪೊಲೀಸ್ ಅಧೀಕ್ಷಕರೊಂದಿಗೆ ಹಂಚಿಕೊಳ್ಳಲಾಗುವುದು, ಅವರು ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಬಹುದು ಅಥವಾ ತನಿಖೆಯನ್ನು ಮಾಡುವಂತೆ ನಿರ್ದೇಶಿಸಬಹುದು, ಅವರು ಹಾಗೆ ಮಾಡಲು ವಿಫಲರಾದರೆ, ನೊಂದ ವ್ಯಕ್ತಿ ಮ್ಯಾಜಿಸ್ಟ್ರೇಟ್ಗೆ ಅರ್ಜಿಯನ್ನು ಸಲ್ಲಿಸಬಹುದು.18
- ದೂರುದಾರರು FIR ನ ಪ್ರತಿಯನ್ನು ಉಚಿತವಾಗಿ ಪಡೆಯಬಹುದು.19 FIR ಸಂಖ್ಯೆ, FIR ದಿನಾಂಕ ಮತ್ತು ಪೊಲೀಸ್ ಠಾಣೆಯ ಹೆಸರನ್ನು ಬಳಸಿಕೊಂಡು FIR ಅನ್ನು ಆನ್ಲೈನ್ನಲ್ಲಿ ವೀಕ್ಷಿಸಬಹುದು..
- FIR ದಾಖಲಾದ ನಂತರ, ಅದರ ವಿಷಯಗಳನ್ನು ಬದಲಾಯಿಸಲಾಗುವುದಿಲ್ಲ. ಆದಾಗ್ಯೂ, ಹೆಚ್ಚುವರಿ ಮಾಹಿತಿಯನ್ನು ನಂತರ ಯಾವುದೇ ಹಂತದಲ್ಲಿ ಪೊಲೀಸರಿಗೆ ನೀಡಬಹುದು.
ಏಕ ನಿರ್ಮಿತಿ ಕೇಂದ್ರಗಳು/ ಒನ್ ಸ್ಟಾಪ್ ಸೆಂಟರ್
ಸಂತ್ರಸ್ತರು ಏಕ ನಿರ್ಮಿತಿ ಕೇಂದ್ರಗಳನ್ನು ಸಹ ಸಂಪರ್ಕಿಸಬಹುದು, ಇದು ಹಿಂಸೆಗೊಳಗಾದ ಮಹಿಳೆಯರಿಗೆ ಉನ್ನತ ಶ್ರೇಣಿಯ ಸೇವೆಗಳನ್ನು ಒದಗಿಸುತ್ತವೆ. ಈ ಸೇವೆಗಳಲ್ಲಿ ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು / ಪ್ರಕರಣ ನಿರ್ವಹಣೆ, ಮಾನಸಿಕ ಸಮಾಲೋಚನೆ ಮತ್ತು ತಾತ್ಕಾಲಿಕ ಆರೈಕೆಗಳು ಒಳಗೊಂಡಿರುತ್ತವೆ.