ಬ್ಯಾಂಕ್ ನಿಮಗೆ ನೀಡಿದ ಪರಿಹಾರ ತೃಪ್ತಿಕರವಾಗಿ ಕಂಡುಬರದಿದ್ದಲ್ಲಿ ಮತ್ತು ನೀವು ದೂರಿನ ಕುರಿತು ಹೆಚ್ಚಿನ ವಿಚಾರಣೆಯನ್ನು ಬಯಸಿದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿರುವ ಬ್ಯಾಂಕಿಂಗ್ ಒಂಬಡ್ಸ್ಮನ್ ಮುಂದೆ ದೂರು ಸಲ್ಲಿಸಲು ಅವಕಾಶವಿದೆ. ಈ ಒಂಬಡ್ಸ್ಮನ್ ವ್ಯವಸ್ಥೆಯನ್ನು ಬ್ಯಾಂಕಿಂಗ್ ಒಂಬಡ್ಸ್ಮನ್ ಯೋಜನೆ, 2006 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಬ್ಯಾಂಕಿನ ಶಾಖೆಯು ಯಾವ ಒಂಬಡ್ಸ್ ಮನ್ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆ ಎಂಬ ಮಾಹಿತಿಯನ್ನು ಪ್ರತಿ ಬ್ಯಾಂಕ್ ತನ್ನ ಶಾಖೆಯಲ್ಲಿ ಪ್ರದರ್ಶಿಸತಕ್ಕದ್ದು. ಈ ಲಿಂಕ್ ಮೂಲಕ ಸಂಬಂಧಿಸಿದ ಬ್ಯಾಂಕಿಂಗ್ ಒಂಬಡ್ಸ್ಮನ್ ಗೆ ನಿಮ್ಮ ದೂರನ್ನು ಸಲ್ಲಿಸಬಹುದು.
ನಿಮ್ಮ ದೂರು ಪರಿಹಾರಕ್ಕಾಗಿ ಬ್ಯಾಂಕಿನ ಮಟ್ಟದಲ್ಲಿ ಲಭ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಪ್ರಯತ್ನಿಸಿ ವಿಫಲರಾದ ನಂತರ ಮಾತ್ರವೇ ನೀವು ಬ್ಯಾಂಕಿಂಗ್ ಒಂಬಡ್ಸ್ಮನ್ ಮುಂದೆ ದೂರು ಸಲ್ಲಿಸಬಹುದಾಗಿದೆ. ನೀವು ನಿಮ್ಮ ಕುಂದುಕೊರತೆಗೆ ಸಂಬಂಧಿಸಿದಂತೆ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಲ್ಲಿ, ಉದಾಹರಣೆಗೆ, ಗ್ರಾಹಕ ದೂರು ಪರಿಹಾರ ವೇದಿಕೆ, ಸದರಿ ನ್ಯಾಯಾಲಯವು ಈ ಪ್ರಕರಣವನ್ನು ವಿಚಾರಣೆ ಮಾಡುತ್ತಿರುವ ಅವಧಿಯಲ್ಲಿ ನೀವು ಒಂಬಡ್ಸ್ಮನ್ ಮುಂದೆ ದೂರು ದಾಖಲಿಸುವಂತಿಲ್ಲ.
ನಿಮ್ಮ ದೂರಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಒಂಬಡ್ಸ್ಮನ್ ನೀಡಿದ ತೀರ್ಪು ನಿಮಗೆ ಸಮಾಧಾನ ನೀಡದಿದ್ದಲ್ಲಿ, ನೀವು ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಬಹುದಾಗಿದೆ. ಬ್ಯಾಂಕಿಂಗ್ ಒಂಬಡ್ಸ್ಮನ್ ಯೋಜನೆಯನ್ನು ಜಾರಿಗೆ ತರುವ ಹೊಣೆಹೊತ್ತಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಈ ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುತ್ತಾರೆ. ಒಂಬಡ್ಸ್ಮನ್ ತೀರ್ಮಾನ ಹೊರಬಿದ್ದ 30 ದಿನಗಳ ಅವಧಿಯೊಳಗೆ ಮೇಲ್ಮನವಿಯನ್ನು ಸಲ್ಲಿಸತಕ್ಕದ್ದು.