ಭಾರತದಲ್ಲಿ ರಾಜ್ಯ ಸರ್ಕಾರಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನೇಮಿಸಿವೆ. ಈ ಅಧಿಕಾರಿಗಳ ಜವಾಬ್ದಾರಿ ಬಾಲ್ಯ ವಿವಾಹಗಳ ಬಗ್ಗೆ ವರದಿ ಮಾಡುವುದು ಮತ್ತು ಅವುಗಳನ್ನು ತಡೆಗಟ್ಟುವುದಾಗಿದೆ. ಪ್ರತಿ ರಾಜ್ಯ ಸರ್ಕಾರವು ಈ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕರ್ತವ್ಯಗಳನ್ನು ನಿರ್ಧರಿಸಿ ನಿಗದಿಪಡಿಸುತ್ತದೆ. ಈ ಕರ್ತವ್ಯಗಳು ಕೆಳಗಿನಂತಿವೆ:
- ಸಮಂಜಸ ಕ್ರಮಗಳನ್ನು ಕೈಗೊಂಡು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು
- ಆರೋಪಿಗಳ ಮೇಲೆ ಮೊಕದ್ದಮೆ ಹೂಡುವುದಕ್ಕೆ ಅವರ ವಿರುಧ್ಧ ಪುರಾವೆ ಸಂಗ್ರಹಿಸುವುದು
- ಸ್ಥಳೀಯ ಜನರಿಗೆ ಬಾಲ್ಯ ವಿವಾಹದಲ್ಲಿ ಭಾಗವಹಿಸದಿರಿ ಹಾಗು ಇಂತಹ ವಿವಾಹಗಳಿಗೆ ಬೆಂಬಲ ನೀಡದಿರಿ ಎಂದು ಸಲಹೆ ಹಾಗು ಸಮಾಲೋಚನೆ ನೀಡುವುದು
- ಬಾಲ್ಯ ವಿವಾಹಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಉದಾಹರಣೆಗೆ, ಪ್ರಸವದ ವೇಳೆ ತಾಯಿಯ ಮರಣ, ಅಪೌಷ್ಟಿಕತೆ, ಕೌಟುಂಬಿಕ ಹಿಂಸೆ, ಇತ್ಯಾದಿ.
- ಬಾಲ್ಯ ವಿವಾಹ ಸಮಸ್ಯೆಯ ಬಗ್ಗೆ ಸಮುದಾಯವನ್ನು ಸಂವೇದನಾಶೀಲಗೊಳಿಸುವುದು.
- ಬಾಲ್ಯ ವಿವಾಹದ ಘಟನೆಗಳು ಎಷ್ಟರ ಮಟ್ಟಿಗೆ, ಯಾವಾಗ, ಮತ್ತು ಎಲ್ಲೆಲ್ಲಿ ಸಂಭವಿಸುತ್ತಿವೆ ಎಂಬ ಅಂಕಿಅಂಶಗಳನ್ನು ನಿಯತಕಾಲಿಕವಾಗಿ ರಾಜ್ಯ ಸರ್ಕಾರಕ್ಕೆ ವರದಿ ಮಾಡುವುದು.
ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಕೆಲವು ಷರತ್ತುಗಳು ಮತ್ತು ಮಿತಿಗಳೊಂದಿಗೆ, ಪೊಲೀಸ್ ಅಧಿಕಾರಿಗಳ ಅಧಿಕಾರಗಳನ್ನು ನೀಡಬಹುದು. ಇಂತಹ ಅಧಿಕಾರಗಳನ್ನು ರಾಜ್ಯದ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯೊಂದನ್ನು ಪ್ರಕಟಿಸಿ ನೀಡಬಹುದಾಗಿದೆ.
ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ, ದಯವಿಟ್ಟು ಈ ಸರ್ಕಾರಿ ದಾಖಲೆಯನ್ನು ಓದಿ (೧೯-೨೨ ಪುಟಗಳು)